ADVERTISEMENT

ಒತ್ತುವರಿ ತೆರವಿಗೆ ಭುಗಿಲೇಳಲಿದೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:35 IST
Last Updated 8 ಅಕ್ಟೋಬರ್ 2011, 10:35 IST

ಚಿಕ್ಕಮಗಳೂರು: ಕಂದಾಯ ಭೂಮಿ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕೈ ಹಾಕಿದರೆ ಮಲೆನಾಡಿನಲ್ಲಿ ಬೆಂಕಿ ಹೊತ್ತಿ ಉರಿಯಲಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ದೇವರಾಜ್ ಎಚ್ಚರಿಸಿದರು.

ಕಂದಾಯ ಭೂಮಿ ಒತ್ತು ವರಿ ಮಾಡಿರುವ ರೈತರಿಂದ ಪ್ರತಿ ತಾಲ್ಲೂಕಿನಲ್ಲಿ ತಿಂಗಳಿಗೆ 100 ಎಕರೆ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ತಹಶೀ ಲ್ದಾ ರರಿಗೆ ಸೂಚನೆ ನೀಡಿ, ಆದೇಶ ಹೊರಡಿಸಿದ್ದಾರೆ. ಇದು ಹಾಸ್ಯಾಸ್ಪದ. ಜಿಲ್ಲಾಧಿಕಾರಿ ಅವರದು ಮಹಮದ್‌ಬಿನ್ ತುಘಲಕ್ ವರ್ತನೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

ಜಿಲ್ಲಾಧಿಕಾರಿ ಆದೇಶ ಗಮನಿಸಿದರೆ ಜಿಲ್ಲೆಯ ರೈತರ ಮಾರಣಹೋಮಕ್ಕೆ  ಹೊರಟಂತಿದೆ. ಇದರಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿ ಎದ್ದುಕಾಣುತ್ತಿದೆ. ಹಾಗಾಗಿಯೇ ಅಧಿಕಾರಿಗಳು ದರ್ಪದಿಂದ ವರ್ತಿಸುತ್ತಿದ್ದಾರೆ.
 
ಜಿಲ್ಲಾ ಧಿಕಾರಿ ಹೊರಡಿಸಿರುವ ಸುತ್ತೋಲೆ ರದ್ದುಪಡಿಸಲು ಜಿಲ್ಲೆ ಸಂಸದರೂ ಆದ ಮುಖ್ಯಮಂತ್ರಿಗಳು ಕ್ರಮಕೊಳ್ಳಬೇಕು. ಬಾಲಸುಬ್ರ ಮಣ್ಯಂ ಸಮಿತಿಯನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದ ಗಮನ ಸೆಳೆಯಲು ಇದೇ 12ರಂದು ನಗರದ ಹನುಮಂತಪ್ಪ ವೃತ್ತದಲ್ಲಿ ಆದೇಶ ಪ್ರತಿಸುಟ್ಟು, ಪ್ರತಿಭಟಿಸಲಾಗುವುದು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವ ರೊಂದಿಗೆ ಚರ್ಚಿಸಿ ಹೋರಾಟ ರೂಪಿಸಲಾ ಗುವುದು. ಜಿಲ್ಲಾ ಕಾಫಿ ಬೆಳೆಗಾರರ ಸಂಘ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ಪಕ್ಷ ಬೆಂಬಲಿಸಲಿದೆ ಎಂದರು.

ಜಿಲ್ಲಾಡಳಿತಕ್ಕೆ ಸಾಮರ್ಥ್ಯ ಇದ್ದರೆ ಶಾಸಕರಾದ ಸಿ.ಟಿ.ರವಿ ಮತ್ತು ಡಿ.ಎನ್.ಜೀವರಾಜ್ ಅವರ ಒತ್ತುವರಿ ಭೂಮಿಯನ್ನು ಮೊದಲು ತೆರವು ಗೊಳಿಸಲಿ. ಈ ಹಿಂದೆ ಬಿ.ಎಲ್.ಶಂಕರ್ ಮತ್ತು ಮೋಟಮ್ಮ ಅವರ ಒತ್ತುವರಿ ಭೂಮಿ ಖುಲ್ಲಾ ಮಾಡಿಸಿರುವ ನಿದರ್ಶನವಿದೆ. ಆಲ್ದೂರು ಹೋಬಳಿ ಬಿ.ಕೆರೆಯಲ್ಲಿ ಅತಿಕ್ರಮಣವಾಗಿರುವ ಕೆರೆ ಮತ್ತು ಗೋಮಾಳವನ್ನು ಜಿಲ್ಲಾಡಳಿತ ಮೊದಲು ಖುಲ್ಲಾ ಮಾಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲ. ತಿಂಗಳಿಗೊಮ್ಮೆ ಮಾವನ ಮನೆಗೆ ಬರುವಂತೆ ಬಂದು ಹೋಗುತ್ತಾರೆ.  ಪ್ರಗತಿ ಪರಿಶೀಲನೆ ನಗರಸಭೆಗೆ ಮಾತ್ರ ಸೀಮಿತವಾಗಿದೆ. ನಗರಸಭೆ ಒಂದೇ ಜಿಲ್ಲೆಯ ಸರ್ವಸ್ವವೇ? ಎಂದು ಪ್ರಶ್ನಿಸಿದ ಅವರು, ನಗರಸಭೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಶಾಸಕರು ಸಾರ್ವಜನಿಕವಾಗಿ ಒಪ್ಪಿ ಕೊಂಡು, ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೂ ಸೂಚಿಸಿದ್ದರು.
 
ಆದರೆ, ಈವರೆಗೂ ತನಿಖೆಯಲ್ಲಿ ಪ್ರಗತಿ ಆಗಿಲ್ಲ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಇನ್ನೂ ಕ್ರಮ ಕೈಗೊಂಡಿಲ್ಲ. ಇವೆಲ್ಲ ಗಮನಿಸಿದರೆ ಶಾಸಕರು ಮತ್ತು ಸಚಿವರ ಮೇಲೆ ಸಂಶಯ ಮೂಡುವಂತಾಗಿದೆ. ಕಾಮ ಗಾರಿಗಳು ಮತ್ತು ಗುತ್ತಿಗೆದಾರರ ಹೆಸರು, ಪಕ್ಷದ ವಿವರವುಳ್ಳ ಶ್ವೇತಪತ್ರ ಹೊರಡಿಸಲಿ ಎಂದರು.

ಬರಪೀಡಿತ ಘೋಷಣೆಯಲ್ಲಿ ತಾರತಮ್ಯ: ಜಿಲ್ಲೆಯ ಬರಪೀಡಿತ ಘೋಷಣೆಯಲ್ಲಿ ಸರ್ಕಾರ ತಾರತಮ್ಯ ಮಾಡಿದೆ.
ಕಡೂರನ್ನು ಬರಪೀಡಿತ ತಾಲ್ಲೂಕಾಗಿ ಘೋಷಿಸಿ ರುವುದು ಸ್ವಾಗತಾರ್ಹ. ಆದರೆ, ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಮತ್ತು ಅಂಬಳೆ ಹೋಬಳಿ, ತರೀಕೆರೆ ತಾಲ್ಲೂಕಿನ ನಾಲ್ಕು ಹೋಬಳಿ ಗಳು ಸಂಪೂರ್ಣ ಬರಗಾಲಕ್ಕೆ ತುತ್ತಾಗಿದ್ದರೂ ಕೈಬಿಟ್ಟಿ ರುವುದು ಸರಿಯಲ್ಲ. ಸರ್ಕಾರ ಕೂಡಲೇ ಬೆಳೆ ನಾಶವಾಗಿರುವ ಈ ಎಲ್ಲ ಹೋಬಳಿಗಳನ್ನು ಬರಪೀಡಿತ ಪ್ರದೇಶಗಳಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು. 

  ಮುಖಂಡರಾದ ಸೋಮ ಶೇಖರ್, ರಮೇಶ್, ಚಂದ್ರಪ್ಪ, ಮಂಜಪ್ಪ, ಮಾನು ಮಿರಾಂಡ, ಭೈರೇಗೌಡ ಮತ್ತಿತರರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.