ADVERTISEMENT

ಕಡೂರು: ನಾಮಪತ್ರ ಸಲ್ಲಿಕೆ ಭರಾಟೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 10:57 IST
Last Updated 18 ಏಪ್ರಿಲ್ 2013, 10:57 IST

ಕಡೂರು (ಬೀರೂರು): ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಬುಧವಾರ ಮುಕ್ತಾಯಗೊಂಡಿದ್ದು ಅಂತಿಮ ದಿನ 9 ಅಭ್ಯರ್ಥಿಗಳು 12 ನಾಮಪತ್ರ ಸಲ್ಲಿಸಿದರು.

ವಿಧಾನಸಭಾ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿದವರಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ಬಿಎಸ್‌ಆರ್ ಕಾಂಗ್ರೆಸ್‌ನ ಬಿ ಫಾರಂ ನೊಂದಿಗೆ ಉಮೇದುವಾರಿಕೆ ಸಲ್ಲಿಸಿದ ಕೆ.ಎಂ.ಕೆಂಪರಾಜ್ ಮತ್ತು ಜೆಡಿಎಸ್‌ನ ರಾಜ್ಯ ವಕ್ತಾರ ವೈ.ಎಸ್.ವಿ.ದತ್ತ ಪ್ರಮುಖರಾಗಿದ್ದಾರೆ.ಉಳಿದಂತೆ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕುಮಾರನಾಯ್ಕ,ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಚ್.ನಾಗರಾಜ್,ಶಿವರುದ್ರಪ್ಪ,ಜನಾರ್ದನರಾವ್ ನಾಮಪತ್ರ ಸಲ್ಲಿಸಿದರು.

ಈಗಾಗಲೇ ಒಮ್ಮೆ ನಾಮಪತ್ರ ಸಲ್ಲಿಸಿದ್ದರೂ ಬುಧವಾರ ಅಧಿಕೃತ ಬಿ ಫಾರಂನೊಂದಿಗೆ ಕೆ.ಎಂ.ಕೆಂಪರಾಜ್ ಒಂದು ನಾಮಪತ್ರ ಸಲ್ಲಿಸಿದರೆ, ವೈ.ಎಸ್.ವಿ.ದತ್ತ ಎರಡು ನಾಮಪತ್ರ ಸಲ್ಲಿಸಿದರು.ಬಿಜೆಪಿ ಪರವಾಗಿ ಮತ್ತೆ ಮೂರು ನಾಮಪತ್ರಗಳು,ಕೆಜೆಪಿ ಪರವಾಗಿ ಒಂದು,ಪಕ್ಷೇತರ ಗಂಗಾಧರಪ್ಪ ಒಂದು,ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕುಮಾರನಾಯ್ಕ ಒಂದು, ಪಕ್ಷೇತರರಾದ ನಾಗರಾಜ್, ಜನಾರ್ದನರಾವ್ ಮತ್ತು ಶಿವರುದ್ರಪ್ಪ ತಲಾ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದು ಒಟ್ಟಾರೆ ಕಣದಲ್ಲಿ 12 ಅಭ್ಯರ್ಥಿಗಳು ಇದ್ದಾರೆ.

ಪಟ್ಟಣದ ಮರವಂಜಿ ವೃತ್ತದಿಂದ ನೂರಾರು ಕಾರ್ಯಕರ್ತರೊಂದಿಗೆ ಡೊಳ್ಳು, ನಾಸಿಕ್‌ಬ್ಯಾಂಡ್ ವಾದನಗಳ ಮಧ್ಯೆ ಸಾಗಿಬಂದ ಕೆ.ಎಂ.ಕೆಂಪರಾಜ್ ಮಧ್ಯಾಹ್ನ 1.30ರ ವೇಳೆಗೆ ಸೂಚಕರಾದ ಭೀಮಪ್ಪ, ಬಸವರಾಜ್, ಶಿವಮೂರ್ತಿ ನಾಯ್ಕ ಮತ್ತು ಹೈದರ್‌ಖಾನ್‌ರೊಂದಿಗೆ ಕಾಲ್ನಡಿಗೆಯಲ್ಲಿ  ಬಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿ ಹೊರಬಂದಾಗ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ.ದತ್ತ ಎದುರಾಗಿ ಕೈಮುಗಿದರೆ ಕೆಂಪರಾಜ್ ಮುಗುಳ್ನಗೆ ಬಿರಿ ಹೊರನಡೆದರು. ವೈ.ಎಸ್.ವಿ.ದತ್ತ ಯಗಟಿ ಮಲ್ಲಿಕಾರ್ಜುನಸ್ವಾಮಿ, ಅರೆಕಲ್ಲಮ್ಮ, ವೀರನಾರಾಯಣ ಸ್ವಾಮಿಗೆ ಗ್ರಾಮದಲ್ಲಿ ಪೂಜೆ ಸಲ್ಲಿಸಿ ಕಡೂರಿನಲ್ಲಿ ವಾಸವಿ, ಬನಶಂಕರಿ ಮತ್ತು ವೆಂಕಟೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಸಹಸ್ರಾರು ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯಲ್ಲಿ ಲಂಬಾಣಿ ಮಹಿಳೆಯರ ನೃತ್ಯ, ವೀರಗಾಸೆ, ಡೊಳ್ಳು ಮತ್ತು ವಿಶೇಷವಾಗಿ 50ಕ್ಕೂ ಹೆಚ್ಚು ಎತ್ತಿನಗಾಡಿಗಳ ಮೆರವಣಿಗೆ 80ರ ದಶಕದ ಮೊದಲ ಬಾರಿ ಜನತಾಪಕ್ಷ ಅಧಿಕಾರ ಪಡೆದಾಗ ಹಳ್ಳಿಗಳಲ್ಲಿ ನಡೆದ ಸಂಭ್ರಮದ ನೆನಪು ಮಾಡಿಕೊಡುವಂತಿದ್ದವು. ಸುಮಾರು 8ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ದತ್ತ ನಾಮಪತ್ರ ಸಲ್ಲಿಸಲು ಬಂದಾಗ ಕಾರ್ಯಕರ್ತರ ಹರ್ಷೋದ್ಘಾರಗಳು ಮುಗಿಲು ಮುಟ್ಟಿದ್ದವು.

ಮೆರವಣಿಗೆಯಲ್ಲಿ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಬಾಳೆಹಣ್ಣು, ಎಳನೀರು, ಕಬ್ಬಿನಹಾಲು ಸೇವಿಸಿದ ದತ್ತ ಎತ್ತಿನಗಾಡಿಯ ಮೂಲಕ ಸಾಗಿಬಂದರು.

ಚುನಾವಣಾಧಿಕಾರಿಗಳ ಕಚೇರಿ ಮುಂದೆ ಜೆಡಿಎಸ್ ಕಾರ್ಯಕರ್ತರ ಅಬ್ಬರ ಸಹಿಸಲು ಪೊಲೀಸ್ ಸಿಬ್ಬಂದಿ ಪ್ರಯಾಸಪಟ್ಟರೆ, ದತ್ತ ಮತ್ತು ಅವರ ಪತ್ನಿ ಹಾಗೂ ಸೂಚಕರು ಒಳಬರಲು ಹರಸಾಹಸ ಪಡಬೇಕಾಯಿತು.

ವೈ.ಎಸ್.ವಿ.ದತ್ತ ಪತ್ನಿ ನಿರ್ಮಲಾ, ಮರವಂಜಿ ವೆಂಕಟೇಶಪ್ಪ, ಭಂಡಾರಿ ಸೋಮಶೇಖರಪ್ಪ, ಪಾತೇನಹಳ್ಳಿ ಚೌಡಪ್ಪ ಅವರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.