ADVERTISEMENT

‘ಕರಗಡ ಎರಡನೇ ಹಂತ ಪೂರ್ಣಕ್ಕೆ ಬದ್ಧ’

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ– ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಮೇ 2018, 10:31 IST
Last Updated 5 ಮೇ 2018, 10:31 IST

ಚಿಕ್ಕಮಗಳೂರು: ‘ಕ್ಷೇತ್ರದ ಅಭಿವೃದ್ಧಿ, ಮೂಲ ಸೌಕರ್ಯ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಲು ಬದ್ಧನಾಗಿದ್ದೇನೆ’ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಇಲ್ಲಿ ಶುಕ್ರವಾರ ಹೇಳಿದರು.

‘ಕರಗಡ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕೆರೆಗಳಿಗೆ ನೀರು ತುಂಬಿಸುವುದು, ಪುನರುಜ್ಜೀವನಗೊಳಿಸಲಾಗುವುದು. ಜಿಲ್ಲಾಸ್ಪತ್ರೆ, ಪಶು ಚಿಕಿತ್ಸಾಲಯ ಮೇಲ್ದರ್ಜೆಗೇರಿಸುವುದು, ಮಾಹಿತಿ ತಂತ್ರಜ್ಞಾನ ಪಾರ್ಕ್, ಪೆಪ್ಪರ್ ಪಾರ್ಕ್, ಡೇರಿ ಶೈತ್ಯಾಗಾರ, ದೇವನೂರು ಭಾಗದಲ್ಲಿ ಗಾರ್ಮೆಂಟ್ಸ್, ಸಖರಾಯಪಟ್ಟಣ ಭಾಗದಲ್ಲಿ ತೆಂಗಿನ ನಾರಿನ ಘಟಕ ಸ್ಥಾಪನೆ ಅಂಶಗಳು ಪ್ರಣಾಳಿಕೆಯಲ್ಲಿ ಇವೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ದೊಡ್ಡ ಉದ್ಯಾನ, ಫುಡ್‌ ಕೋರ್ಟ್, ಬಹುಮಹಡಿ ಪಾರ್ಕಿಂಗ್ ಸಮುಚ್ಛಯ, ಒಳಾಂಗಣ ಕ್ರೀಡಾಂಗಣ, ಟ್ರಕ್ ಟರ್ಮಿನಲ್, ಕೈಗಾರಿಕಾ ವಸಹಾತು ನಿರ್ಮಿಸಲಾಗುವುದು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಆಧುನೀಕರಣ– ವಿಸ್ತರಣೆ ಅಂಶಗಳು ಇವೆ ಎಂದರು.

ADVERTISEMENT

ಗ್ರಾಮೀಣ ಶಾಲಾ ಶಿಕ್ಷಕರಿಗೆ ವಸತಿ ನಿರ್ಮಾಣ, ಕಾಫಿ ತೋಟ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ, ಪ್ರವಾಸಿಗರಿಗೆ ತೆರೆದ ಬಸ್‌ ಸೌಲಭ್ಯ, ನಗರದ ವಾಣಿಜ್ಯ ರಸ್ತೆಗಳಲ್ಲಿ ಉಚಿತ ವೈಫೈ ಸೇವೆ ಅಂಶಗಳು ಇವೆ ಎಂದು ಹೇಳಿದರು.

ಮೂರು ಬಾರಿ ಆಯ್ಕೆಯಾದ ಸ್ಥಳೀಯ ಶಾಸಕರ ಕಾರ್ಯವೈಖರಿಗೆ ಮತದಾರರಲ್ಲಿ ಅಸಮಾಧಾನ ಇದೆ. ರೈತ ಸಂಘ, ಸಿಪಿಐ, ದಲಿತ ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿವೆ. ಅತ್ತಿಕಟ್ಟೆ ಜಗನ್ನಾಥ್, ರೇಖಾ ಹುಲಿಯಪ್ಪಗೌಡ, ಎಸ್‌.ಕೊಪ್ಪಲು ನಟರಾಜ್ ಕಾಂಗ್ರೆಸ್‌ ಸೇರಿರುವುದು ಬಲ ಹೆಚ್ಚಿಸಿದೆ ಎಂದು ಹೇಳಿದರು.

ವಿಳಾಸ ಇಲ್ಲದಿರುವವರು, ವಿಳಾಸ ಇರುವವರ ನಡುವಿನ ಚುನಾವಣೆ ಎಂದು ಹೇಳಿಕೆ ನೀಡಿರುವುದು ಬಿಜೆಪಿ ಮುಖಂಡರ ಉದ್ಧಟತನ ತೋರಿಸುತ್ತದೆ. ಗಾಂಧಿನಗರದಲ್ಲಿ ಎಲ್.ಕೆ.ಅಡ್ವಾಣಿ, ವಾರಣಸಿಯಲ್ಲಿ ಪ್ರಧಾನಿ ಮೋದಿ ಅವರ ವಿಳಾಸ ಎಲ್ಲಿದೆ ಎಂಬುದನ್ನು ಬಿಜೆಪಿಗರು ಸ್ಪಷ್ಟಪಡಿಸಿ, ನಂತರ ಬೇರೆಯವರ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ, ಕಪ್ಪುಹಣವನ್ನು ದೇಶಕ್ಕೆ ತರುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದರು. ಆದರೆ, ಅದನ್ನು ಮಾಡಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿರುವುದು ಅಧರ್ಮ. ಅದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ. ಈ ಬಾರಿಯ ಚುನಾವಣೆಯು ಧರ್ಮ ಮತ್ತು ಅಧರ್ಮ, ಸತ್ಯ ಮತ್ತು ಅಸತ್ಯ, ಹಣ ಹಾಗೂ ಗುಣದ ನಡುವಿನ ಹೋರಾಟ’ ಎಂದರು.

ಪಕ್ಷದ ಮುಖಂಡರಾದ ಬಿ.ಎಂ.ಸಂದೀಪ್, ಎಚ್.ಪಿ.ಮಂಜೇಗೌಡ, ಶಿವಾನಂದಸ್ವಾಮಿ ಇದ್ದರು.

‘ಸ್ವಾಭಿಮಾನಿ ಸಮಾವೇಶ ಕಾಂಗ್ರೆಸ್ ಪ್ರಾಯೋಜಿತವಲ್ಲ’

‘ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿಯಿಂದ ನಗರದ ಅಂಡೆ ಛತ್ರದ ಬಳಿ ಈಚೆಗೆ ನಡೆದ ಸ್ವಾಭಿಮಾನಿ ಸಮಾವೇಶ ಕಾಂಗ್ರೆಸ್ ಪ್ರಾಯೋಜಿತವಲ್ಲ. ಕಾರ್ಯಕ್ರಮದ ಹಿಂದಿನ ದಿನ ಜಿಲ್ಲಾಡಳಿತ ಅನುಮತಿ ರದ್ದುಪಡಿಸಿರುವುದು ಸರಿಯಲ್ಲ. ಸಮಾವೇಶ ನಡೆಸಿದ್ದಕ್ಕೆ ಸಮಿತಿಯವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು’ ಎಂದು ಬಿ.ಎಲ್‌.ಶಂಕರ್‌ ಪ್ರತಿಕ್ರಿಯಿಸಿದರು.

‘ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿಯಿಂದ ನಗರದ ಅಂಡೆ ಛತ್ರದ ಬಳಿ ಈಚೆಗೆ ನಡೆದ ಸ್ವಾಭಿಮಾನಿ ಸಮಾವೇಶ ಕಾಂಗ್ರೆಸ್ ಪ್ರಾಯೋಜಿತವಲ್ಲ. ಕಾರ್ಯಕ್ರಮದ ಹಿಂದಿನ ದಿನ ಜಿಲ್ಲಾಡಳಿತ ಅನುಮತಿ ರದ್ದುಪಡಿಸಿರುವುದು ಸರಿಯಲ್ಲ. ಸಮಾವೇಶ ನಡೆಸಿದ್ದಕ್ಕೆ ಸಮಿತಿಯವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು’ ಎಂದು ಬಿ.ಎಲ್‌.ಶಂಕರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.