ಕಳಸ: ತಾಯಿ ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವ್ಯಕ್ತಿಯೊಬ್ಬ ಕತ್ತಿಯೇಟು ತಿಂದು ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಹಿರೇಬೈಲು ಸಮೀಪದ ಕೋಟೆಮಕ್ಕಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಇಡಕಿಣಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಕೋಟೆಮಕ್ಕಿಯ ಚಿಕ್ಕನಹಡ್ಲು ಪ್ರದೇಶದ ನಿವಾಸಿಯಾದ ಟ.ಎಂ.ರವೀಶ (49) ಅವರೇ ಈಗ ತನ್ನದಲ್ಲದ ತಪ್ಪಿಗಾಗಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ.
ಘಟನೆಯ ವಿವರ: ಚಿಕ್ಕನಹಡ್ಲು ನಿವಾಸಿಯಾದ ಡೆನ್ನಿಸ್ ಡಿಸೋಜ ಗುರುವಾರ ರಾತ್ರಿ 8.30ರ ವೇಳೆಗೆ ಪಾನಮತ್ತನಾಗಿ ತನ್ನ ಮನೆಯಲ್ಲಿ ತಾಯಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಡೆನ್ನಿಸ್ ತನ್ನ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಮುಂದಾದ ಎಂದು ತಿಳಿದುಬಂದಿದೆ.
ವೃದ್ಧೆ ನತಾಲಿಯಾ ಡಿಸೋಜ ಅವರ ಕೂಗು ಕೇಳಿ ಅವರ ಸಮೀಪದ ಮನೆಯಲ್ಲೇ ವಾಸಿಸುತ್ತಿದ್ದ ರವೀಶ್ ಆಕೆಯ ನೆರವಿಗಾಗಿ ಡೆನ್ನಿಸ್ ಮನೆಗೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಳ ಬಿಡಿಸಲು ಬಂದ ರವೀಶ್ ವಿರುದ್ಧವೂ ಡೆನ್ನಿಸ್ ಕಿಡಿಕಾರಿದ್ದು ಆತನ ಮೇಲೂ ಹಲ್ಲೆಗೆ ಮುಂದಾಗ್ದ್ದಿದಾರೆ. ರವೀಶನ ಮೇಲೆ ಡೆನ್ನಿಸ್ ಕತ್ತಿ ಬೀಸಿದಾಗ ಮೊದಲಿಗೆ ರವೀಶ್ ಅವರ ಎಡಗೈಯ ಬೆರಳುಗಳು ಕತ್ತರಿಸಿಹೋಗಿವೆ.
ಆನಂತರದ ಪೆಟ್ಟು ರವೀಶ್ ಅವರ ಕುತ್ತಿಗೆಯ ಎಡಭಾಗಕ್ಕೆ ಆಳವಾಗಿ ಬಿದ್ದಿದೆ ಎಂದು ಕಳಸ ಠಾಣಾಧಿಕಾರಿ ರಾಮಚಂದ್ರನಾಯಕ್ ತಿಳಿಸಿದ್ದಾರೆ.
ರಕ್ತಸ್ರಾವದಿಂದಾಗಿ ಅಸ್ವಸ್ಥರಾಗಿರುವ ರವೀಶ್ ಅವರನ್ನು ಮಂಗಳೂರಿಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಆದರೆ ಅವರ ಸ್ಥಿತಿ ಗಂಭೀರವಾಗಿದ್ದು ಇನ್ನೂ ಪ್ರಜ್ಞೆಯೇ ಬಂದಿಲ್ಲ. ಆರೋಪಿ ಡೆನ್ನಿಸ್ ಡಿಸೋಜನನ್ನು ಸ್ಥಳೀಯರ ನೆರವಿನೊಂದಿಗೆ ಕಳಸ ಪೊಲೀಸರು ಬಾಳೆಹೊಳೆಯಲ್ಲಿ ಶುಕ್ರವಾರ ಮಧ್ಯಾಹ್ನ ಸೆರೆ ಹಿಡಿದಿದ್ದಾರೆ. ಆರೋಪಿ ವಿರುದ್ಧ ಕೊಲೆ ಆರೋಪದ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.