ADVERTISEMENT

`ಕಷ್ಟಗಳು ಸುಖಾಗಮನದ ಹೆಗ್ಗುರುತು'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 7:52 IST
Last Updated 4 ಸೆಪ್ಟೆಂಬರ್ 2013, 7:52 IST

ಬಾಳೆಹೊನ್ನೂರು: ಕಷ್ಟ ಸುಖಗಳು ಬಂದಾಗ ಕುಗ್ಗದೇ ಸಮತೋಲನ ಸ್ಥಿತಿಯಲ್ಲಿ ಬದುಕಿ ಬಾಳುವುದೇ ಮನುಷ್ಯನ ಗುರಿಯಾಗಬೇಕು. ಕಷ್ಟಗಳು ಸುಖಾಗಮನದ ಹೆಗ್ಗುರುತು ಎಂದು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಂಭಾಪುರಿ ಪೀಠದಲ್ಲಿ ಶ್ರೀಮದ್ವೀರಶೈವ ಸದ್ಭೋದನಾ ಸಂಸ್ಥೆ ಪ್ರಸಾರಾಂಗದಿಂದ ಇತ್ತೀಚೆಗೆ ಆಯೋಜಿಸಿದ್ದ ವೀರಶೈವ ವಿಶೇಷ ಉಪನ್ಯಾಸ ಮಾಲಿಕೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಹಾನುಭಾವರ ದೃಷ್ಟಿಯಲ್ಲಿ ಭೌತಿಕ ಸಂಪತ್ತು ತೃಣಕ್ಕೆ ಸಮಾನ. ಆಧ್ಯಾತ್ಮ ಸಂಪತ್ತು ನಿಜವಾದ ಸಂಪತ್ತೆಂದು ಅರುಹಿ ಜ್ಞಾನವಾಹಿನಿಯೆದೆ ಆಚಾರ್ಯರು ಋಷಿ ಮುನಿಗಳು ಸನ್ಮಾರ್ಗದೆಡೆಗೆ ಕರೆತಂದಿದ್ದಾರೆ. ವಿಶ್ವಧರ್ಮದ ವಿಭು ಜಗದ್ಗುರು ರೇಣುಕಾಚಾರ್ಯರು ಮಾನವ ಜೀವನದ ಸಂವರ್ಧನೆಗೆ ಅತ್ಯಮೂಲ್ಯಬೋಧಾಮೃತ ಬೋಧಿಸಿದ್ದಾರೆ ಎಂದರು.

ಹಲಗೂರು ಬೃಹನ್ಮಠದ ರುದ್ರಮುನಿ ಶಿವಾಚಾರ್ಯ ಮಾತನಾಡಿ, ಜೀವಾತ್ಮ ಪರಮಾತ್ಮನಾಗುವ, ದೇಹ ದೇವಾಲಯವಾಗುವ ವಿಚಾರಗಳನ್ನು ಜಗದ್ಗುರು ರೇಣುಕಾಚಾರ್ಯರು ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ ಎಂದರು.

ವೀರಶೈವ ಗುರು ಪರಂಪರೆಯ ಕುರಿತು ಕೂಡಲಕ್ಷೇತ್ರದ ಉತ್ತರಾಧಿಕಾರಿ ಮಹೇಶ್ವರ ದೇವರು ಮಾತನಾಡಿ, ವೀರಶೈವ ಧರ್ಮಸಂಸ್ಕೃತಿ ಅತ್ಯಂತ ಅಮೂಲ್ಯವಾಗಿದ್ದು, ಗುರುವಿನ ಮಾರ್ಗದರ್ಶನದಲ್ಲಿ ಬಾಳನ್ನು ಬೆಳಗಿಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.