ADVERTISEMENT

ಕಾಫಿ ಬೆಳೆಗಾರರ ನೆರವಿಗೆ ಸರ್ಕಾರ ಬರಲಿ: ದೇವರಾಜ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 10:05 IST
Last Updated 18 ಮಾರ್ಚ್ 2014, 10:05 IST

ಚಿಕ್ಕಮಗಳೂರು: ಮಲೆನಾಡಿನಲ್ಲಿ ಅಕಾಲಿಕ ಮಳೆಯಿಂದ ಅರೆಬಿಕಾ ಕಾಫಿ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ಬೆಳೆಗಾರರು ಸರ್ವನಾಶದ ಅಂಚಿಗೆ ಬರುವಂತಾಗಿದೆ. ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಬರಬೇಕು ಎಂದು ಜೆಡಿಎಸ್‌ ಮುಖಂಡ ಎಚ್‌.ಎಚ್‌. ದೇವರಾಜ್‌ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಅಕಾಲಿಕ ಮಳೆ ಸುರಿದು ಅರೆಬಿಕಾ ಕಾಫಿ ಹೂವಿನ ಬೀಡು ಬಂದಿದೆ. ಹೂವು ಫಸಲು ಗಟ್ಟಲು ಪೂರಕವಾಗಿ ಮಳೆ ಬಾರದೆ, ಅರಿಸಿಣ ಮಗ್ಗು ಬಿದ್ದಿದೆ. ಫಸಲುಗಟ್ಟಲು ಅಗತ್ಯ ನೀರುಣಿಸಲು ಮಲೆ ನಾಡಿನಲ್ಲಿ ನದಿತೊರೆಗಳು ಬತ್ತಿ ನೀರಿಲ್ಲ ದಂತಾಗಿದೆ. ಅಲ್ಲದೆ ಕಾಂಡ ಕೊರಕ ಹುಳು ಬಾಧೆ ಅಧಿಕವಾಗಿದೆ ಎಂದರು.

ಕಾಫಿ ಬೆಲೆ ಏರಿಕೆಯಾಗಿದ್ದರೂ ಅದು ಬೆಳೆಗಾರರಿಗೆ ದಕ್ಕಲಿಲ್ಲ. ದಲ್ಲಾಳಿಗಳ ಹಾವಳಿ, ದಿಕ್ಕುತಪ್ಪಿಸುವ ರಾಜಕಾರಣಿಗಳಿಂದಾಗಿ ಶೇ.90ರಷ್ಟು ಬೆಳೆಗಾರರು ಬೆಲೆ ಬರುವ ಮೊದಲೇ ಕಾಫಿಯನ್ನು ಮಾರಾಟ ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಬೇಕು. ಕಾಫಿ ಮಂಡಳಿ ಅಧಿಕಾರಿಗಳು ನಿದ್ರಾವ ಸ್ಥೆಯಿಂದ ಎಚ್ಚೆತ್ತು ಕೊಂಡು ಬೆಳೆಗಾರರ ನೆರವಿಗೆ ನಿಲ್ಲ ಬೇಕು ಎಂದು ಒತ್ತಾಯಿಸಿದರು.

ಮಲೆನಾಡು ಮತ್ತು ಬಯಲು ಸೀಮೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿರುವ ಬಗ್ಗೆ ಅನೇಕ ಬಾರಿ ಗಮನ ಸೆಳೆದರೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿಲ್ಲ. ಜಿಲ್ಲೆ ಸಮಸ್ಯೆ ಬಗೆಹರಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯಿತಿಗಳಿಂದ ವರದಿ ತರಿಸಿಕೊಂಡು ಕುಡಿಯುವ ನೀರಿನ ಸಮಸ್ಯೆಗಳು ತಲೆದೋರಿರುವ ಗ್ರಾಮಗಳಲ್ಲಿ ಅಗತ್ಯ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಗಳು ಅವಕಾಶ ನೀಡುತ್ತಿಲ್ಲ. ಚುನಾವಣಾ ಆಯೋಗ ಕೂಡ ಕಾಂಗ್ರೆಸ್‌ ಮತ್ತು ಬಿಜೆಪಿ ಜತೆಗೆ ರಾಜೀ ಮಾಡಿಕೊಂಡಿರುವಂತೆ ಕಾಣಿಸುತ್ತಿದೆ. ಪ್ರತಿ ಗ್ರಾಮ ದಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಭಾವ ಚಿತ್ರದ ಫ್ಲೆಕ್ಸ್‌ ರಾರಾಜಿಸುತ್ತಿವೆ. ಮುಖ್ಯ ಮಂತ್ರಿಗಳ ಭಾವಚಿತ್ರ ಇರುವ ಜಾಹೀರಾತು ಫಲಕ ಗಳಿಗೂ ಮುಸುಕು ಹಾಕಿಲ್ಲ. ಜಿಲ್ಲಾಡಳಿತ ಇಷ್ಟೊಂದು ನಿಷ್ಕ್ರಿಯವಾಗಿದ್ದರೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಕಾನೂನು ಕೈಗೆತ್ತಿಕೊಳ್ಳಲು ಕರೆನೀಡಬೇಕಾಗುತ್ತದೆ. ಆಗ ನಮ್ಮ ಕಾರ್ಯಕರ್ತರೇ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯ ಎಚ್‌.ಡಿ.ತಮ್ಮಯ್ಯ ತಮ್ಮನ್ನು ಹೀಯಾಳಿಸಿ ಟೀಕಿಸಿರುವ ಬಗ್ಗೆ ವಾಗ್ದಾಳಿ ನಡೆಸಿದ ಅವರು, ಕಾನೂನು ಕ್ರಮ ಎದುರಿಸಲು ತಮ್ಮಯ್ಯ ಸಿದ್ದರಾಗಬೇಕಾಗುತ್ತದೆ. ಅಲ್ಲದೆ ತಮ್ಮಯ್ಯ ಅವರ ಬಾಯಿಂದ ಹೀಯಾಳಿಕೆ ಮಾತು ಬಂದಿರುವುದು ಅವರ ಹಿಂದಿರುವ ನಾಯಕರ ಕುಮ್ಮಕ್ಕಿನಿಂದ ಎಂದು ಪರೋಕ್ಷವಾಗಿ ಶಾಸಕ ಸಿ.ಟಿ.ರವಿ ವಿರುದ್ಧವೂ ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಿ.ಎಸ್‌. ಚಂದ್ರಪ್ಪ, ಜಮೀಲ್‌ ಅಹಮದ್‌, ಹೊಲದಗದ್ದೆ ಗಿರೀಶ್‌, ಅಣ್ಣಪ್ಪಶೆಟ್ಟಿ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.