ಚಿಕ್ಕಮಗಳೂರು: ತುತ್ತು ಕೂಳಿಗಾಗಿ ಹಗಲು ರಾತ್ರಿ ಶ್ರಮಿಸುವ ಕಾರ್ಮಿಕ ಮತ್ತು ರೈತ ದೇಶದ ಆಧಾರ ಸ್ಥಂಭ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರದ ಟಿಎಪಿಸಿಎಂಎಸ್ ಮುಂಭಾಗದಲ್ಲಿರುವ ಅವರಣದಲ್ಲಿ ಹಮಾಲಿ ಕಾರ್ಮಿಕರ ಸಂಘ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.
ಯಾವುದೇ ಗೋಪುರ ಉಳಿಯಲು ಅಡಿಪಾಯ ಅಗತ್ಯ. ಕೆಲಸ ಮಾಡುವವರ ಕೊರತೆ ಹೆಚ್ಚಿದ್ದರೂ ಕಾಲದ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸಿಗುವ ಗೌರವ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು.
ನಗರದಲ್ಲಿ ಈಗಾಗಲೇ 60 ಕಾರ್ಮಿಕರಿಗೆ ನಿವೇಶನ ನೀಡಲಾಗಿದೆ. ದಾಖಲೆ ಒದಗಿಸುವವರಿಗೆ ನಿವೇಶನ ನೀಡಿ ಮನೆ ಒದಗಿಸುತ್ತೇವೆ. ಟೆಂಡರ್ ಚಿಕನ್ ಪಕ್ಕದಲ್ಲಿ ಹಮಾಲಿ ಕಾರ್ಮಿಕರ ಸಂಘಕ್ಕೆ ನಿವೇಶನ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ಎಸ್.ಎನ್.ಮಂಜುನಾಥ್ ಮಾತನಾಡಿ, ಇಂದು 200 ಜನ ಕಾರ್ಮಿಕರಿಗೂ ಸಮವಸ್ತ್ರ ಮತ್ತು ಗುರುತಿನ ಕಾರ್ಡನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 50 ಜನ ಕಾರ್ಮಿಕರಿಗೆ ಇದನ್ನು ನೀಡಲಾಗುತ್ತದೆ. ಎಲ್ಲ ಸದಸ್ಯರಿಗೂ ಜೀವ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದರು.
ಸಿಪಿಐನ ಬಿ.ಅಮ್ಜದ್ ಮಾತನಾಡಿ, ಬಡವರ ಬಗ್ಗೆ ದನಿಯೆತ್ತುವ ಕಳಕಳಿ ಶಾಸಕ ಸಿ.ಟಿ.ರವಿಯವರಿಗಿದೆ ಎಂದರು.ನಗರಸಭೆ ಅಧ್ಯಕ್ಷ ನಿಂಗೇಗೌಡ, ಸದಸ್ಯ ಎಚ್.ಡಿ.ತಮ್ಮಯ್ಯ, ನಾಮಿನಿ ಸದಸ್ಯ ಮುತ್ತಯ್ಯ, ಅಧ್ಯಕ್ಷ ಮಹಮದ್ ಆಲಿ, ಉಪಾಧ್ಯಕ್ಷ ರಹೀಂಖಾನ್, ಸಹ ಕಾರ್ಯದರ್ಶಿ ನದೀಂ, ಖಜಾಂಚಿ ಅಜ್ಜಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.