ADVERTISEMENT

ಕಾವೇರಿ: ಜಯಲಲಿತಾ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 8:20 IST
Last Updated 7 ಅಕ್ಟೋಬರ್ 2012, 8:20 IST

ನರಸಿಂಹರಾಜಪುರ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರು ವುದನ್ನು ವಿರೋಧಿಸಿ  ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಹಾಗೂ ವಿವಿಧ ಸಂಘ, ಸಂಸ್ಥೆಗಳು ಕರೆ ನೀಡಿದ್ದ ರಾಜ್ಯ ಬಂದ್‌ಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶನಿವಾರ ಸಂತೆ ದಿನವಾಗಿದ್ದ ಪಟ್ಟಣದಲ್ಲಿ ಬಂದ್ ಪ್ರಯುಕ್ತ ಸಂತೆ ನಡೆಯಲಿಲ್ಲ. ಜನರಿಲ್ಲದೆ ರಸ್ತೆಗಳೆಲ್ಲವೂ ಬೀಕೊ ಎನ್ನುತ್ತಿದ್ದವು.

ತಾಲ್ಲೂಕು ಕರ್ನಾಟಕ ಹಿತರಕ್ಷಣಾ ವೇದಿಕೆ, ಜೆಡಿಎಸ್, ತಾಲ್ಲೂಕು ವಕೀಲರ ಸಂಘ, ವರ್ತಕರಸಂಘ ಹಾಗೂ ಛಾಯಾಗ್ರಾಹಕರ ಸಂಘ, ಬ್ಯಾರಿ ಒಕ್ಕೂಟ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದವು. ವಕೀಲರು ನ್ಯಾಯಾ ಲದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜೆಡಿಎಸ್ ಸದಸ್ಯರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ  ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ  ಕೂಗಿದರು. ನಂತರ ಇಲ್ಲಿನ ನೀರಿನ ಟ್ಯಾಂಕ್‌ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು. ತಮಿಳುನಾಡಿನ ಮುಖ್ಯ ಮಂತ್ರಿ ಜಯಲಲಿತಾ ಅವರ  ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜೆಡಿಎಸ್‌ನ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಸಿ.ಜೋಯಿ, ಮುಖಂಡ ರಾದ ಜಾನಕೀರಾಂ, ಬಸವರಾಜಪ್ಪ, ಕಣಿವೆವಿನಯ್, ರಾಜಗೋಪಾಲ ಶ್ರೇಷ್ಠಿ,  ತಾಲ್ಲೂಕು ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಕೀಲ ಕೆ.ಪಿ. ಸುರೇಶ್ ಕುಮಾರ್ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯ ನಂತರ ಕರ್ನಾಟಕ ಹಿತರರಕ್ಷಣಾ ವೇದಿಕೆ ಸದಸ್ಯರು ಬಾಗಿಲು ತೆಗೆದಿದ್ದ ಅಂಚೆಕಚೇರಿ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಬಾಗಿಲು ಮುಚ್ಚಿಸಿದರು.

ಕೃಷಿ ಇಲಾಖೆ ಮತ್ತು ತಹಶೀಲ್ದಾರರ ಕಚೇರಿ ಬಾಗಿಲು ಮುಚ್ಚಲು ಮುಂದಾದಾಗ ಅಧಿಕಾರಿ ಗಳು ಮತ್ತು ರಕ್ಷಣಾ ವೇದಿಕೆಯ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.