ADVERTISEMENT

ಕುಡಿಯುವ ನೀರಿಗೆ ಮಾತ್ರ ಅನುದಾನ ಬಳಸಿ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 9:18 IST
Last Updated 7 ಮಾರ್ಚ್ 2018, 9:18 IST
ಕಡೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.
ಕಡೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.   

ಕಡೂರು: ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು, 14ನೇ ಹಣಕಾಸು ಅನುದಾನವನ್ನು ಕುಡಿ ಯುವ ನೀರಿಗಾಗಿಯೇ ಬಳಸು ವಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾಉಮೇಶ್ ತಿಳಿಸಿದರು.

ಕಡೂರು ತಾಲ್ಲೂಕು ಪಂಚಾ ಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಬೇಸಿಗೆ ಆರಂಭಗೊಳ್ಳುವ ಮುಂಚೆಯೇ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಹಲವು ಗ್ರಾಮಗಳಲ್ಲಿ ಹಣ ನೀಡಿ ಕುಡಿಯುವ ನೀರು ಖರೀದಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಗಳು 14ನೇ ಹಣಕಾಸು ಅನುದಾನವನ್ನು ಬೇರೆ ಯಾವ ಕಾಮಗಾರಿಗಳಿಗೂ ಉಪಯೋಗಿಸದೆ ಕೇವಲ ಕುಡಿಯುವ ನೀರಿನ ಪೂರೈಕೆಯ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಎಲ್ಲಿಯೂ ನೀರಿನ ತೊಂದರೆ ಎದುರಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕು’ ಎಂದರು.

ADVERTISEMENT

ತಾಲ್ಲೂಕಿನಲ್ಲಿ ನಿರಂತರ ಜ್ಯೋತಿ ಅನುಷ್ಟಾನಗೊಳ್ಳಲು ಹೊಸ ವಿದ್ಯುತ್ ಲೈನ್‍ಗಳನ್ನು ಹಾಕುವ ಸಂದರ್ಭದಲ್ಲಿ ನೂರಾರು ಮರಗಳನ್ನು ಕಡಿಯಲಾಗಿದೆ. ಮೊದಲೇ ಬರದಿಂದ ಬಳಲುತ್ತಿರುವ ಈ ಪ್ರದೇಶದಲ್ಲಿ ಮರಗಳನ್ನು ಕಡಿದರೆ ಅದರಿಂದಾಗುವ ನಷ್ಟ ಊಹಾತೀತವಾದದ್ದು. ಮರಗಳನ್ನು ನಾಶಗೊಳಿಸದಂತೆ ವಿದ್ಯುತ್ ಲೈನ್ ಎಳೆಯಲು ಮುಂದಾಗಬೇಕು. ಈ ಕುರಿತು ಅರಣ್ಯ ಇಲಾಖೆಯವರು ಗಮನಹರಿಸಬೇಕು ಎಂದು ಸೂಚಿಸಿದರು.

ಸಖರಾಯಪಟ್ಟಣದ ಮೆಟ್ರಿಕ್ ಪೂರ್ವ ಹಾಸ್ಟೆಲ್ ಮುಂಭಾಗ ದಲ್ಲಿರುವ ಟಿ.ಸಿ ಯನ್ನು ಸ್ಥಳಾಂತರಿಸಲು ಸೂಚಿಸಲಾಗಿದ್ದರೂ, ಹಾಸ್ಟೆಲ್ ವಾರ್ಡನ್ ಅದರ ಅಗತ್ಯವಿಲ್ಲ ಎಂದು ಹೇಳಿದ್ದಾರೆಂಬ ಕಾರಣ ಮುಂದು ಮಾಡಿ ಅದನ್ನು ಹಾಗೆಯೇ ಉಳಿಸಿದ್ದಾರೆ. ಏನಾದರೂ ಅನಾಹುತವಾದರೆ ಅದಕ್ಕೆ ಜವಾಬ್ದಾರಿ ಯಾರು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಆನಂದನಾಯ್ಕ ಪ್ರಶ್ನಿಸಿದರು. ಇದಕ್ಕೆ ಮತ್ತೊಬ್ಬ ಸದಸ್ಯ ಜಿಗಣೇಹಳ್ಳಿ ಮಂಜು ಧ್ವನಿಗೂಡಿಸಿ ವಾರ್ಡ್‍ನ್ ಸೂಚನೆಯಂತೆ ಟಿ.ಸಿ ಸ್ಥಳಾಂತರ ಅಗತ್ಯವಿಲ್ಲ ಎಂಬುದು ಸಮಂಜಸ ಉತ್ತರವಲ್ಲ ಎಂದರು.

ಗುಬ್ಬಿಹಳ್ಳಿ ಗ್ರಾಮದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ಶೌಚಾಲಯ ಅವ್ಯವಸ್ಥೆಯಿಂದ ಕೂಡಿದ್ದು, ವಿದ್ಯಾರ್ಥಿಗಳೇ ಕೆಲಸ ಮಾಡಬೇಕು. ಇದರ ಬಗ್ಗೆ ತಾಲ್ಲೂಕು ಹಿಂದುಳಿದ ವರ್ಗಗಳ ಅಧಿಕಾರಿ ನಾಗವಲ್ಲಿ ಅವರು ಗಮನಹರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಪಂಚನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಾತ್ವಿಕ ಮಂಜೂರಾತಿ ದೊರೆತಿದ್ದು, ನಿವೇಶನ ಕೋರಿ ಗ್ರಾಮ ಪಂಚಾಯಿತಿ, ತಹಶೀಲ್ದಾರ್ ಇಬ್ಬರಿಗೂ ಪತ್ರ ಬರೆಯಲಾಗಿದ್ದು, ಈವರೆಗೂ ನಿವೇಶನ ಮಂಜೂರಾಗಿಲ್ಲ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ ತಿಳಿಸಿದರು.

ದೇವನೂರಿನಿಂದ ಸಖರಾಯ ಪಟ್ಟಣಕ್ಕೆ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯವನ್ನು ಬದಲಾಯಿ ಸುವ ಬಗ್ಗೆ ಕಳೆದ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ ಇದುವರೆಗೂ ಆ ಕೆಲಸವಾಗಿಲ್ಲ ಎಂದು ಸದಸ್ಯ ಆನಂದನಾಯ್ಕ ದೂರಿ ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಪಿ.ಸಿ. ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಮಲಮ್ಮ, ಕಾರ್ಯ ನಿರ್ವಹಣಾಧಿಕಾರಿ ಡಾ. ದೇವರಾಜ್ ನಾಯ್ಕ, ನಯನ, ವಿಜಯ್‍ಕುಮಾರ್, ಮಂಜುಳಾ ಮೋಹನ್, ಸವಿತಾ, ಅಕ್ಷ ಯ್‍ಕುಮಾರ್, ಸವಿತಾ ಆನಂದ್, ಭೋಗಪ್ಪ, ಸುನೀತ ಜಗದೀಶ್, ಭಾರತಿಪ್ರಹ್ಲಾದ್ ಇದ್ದರು.
***
‘ಜನಸ್ಪಂದನ ಸಭೆಯಲ್ಲಿ ಪಕ್ಷದ ಧ್ವಜ’

ಒಂದು ಪಕ್ಷದ ಧ್ವಜವನ್ನು ಹಾಕಿಕೊಂಡು ಅದಕ್ಕೆ ಜನಸ್ಪಂದನ ಸಭೆ ಎಂದು ಕರೆಯುವ ಪರಿಪಾಠವನ್ನು ಶಾಸಕ ಸಿ.ಟಿ.ರವಿ ಮಾಡುತ್ತಿದ್ದಾರೆ. ಅಂತಹ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹೋಗುವುದು ಎಷ್ಟು ಸರಿ ಎಂದು ಆನಂದ್‍ನಾಯ್ಕ ಮತ್ತು ರುದ್ರಮೂರ್ತಿ ಆಕ್ಷೇಪಿಸಿದರು.

ಇದಕ್ಕೆ ಕೆರಳಿದ ಬಿಜೆಪಿ ಸದಸ್ಯ ಜಿಗಣೇಹಳ್ಳಿ ಮಂಜು, ಪಕ್ಷದ ಹೆಸರಿನಲ್ಲಿ ಶಾಸಕರು ಜನಸ್ಪಂದನ ಸಭೆ ಮಾಡುತ್ತಿಲ್ಲ. ಆ ರೀತಿ ಮಾಡಿದ್ದರೆ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.   ಕಡೂರಿನಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಭೆ ಒಂದು ಪಕ್ಷದ ಸಭೆಯಂತೆ ನಡೆದಿದ್ದರೂ ಪ್ರತಿಭಟಿಸದಿರುವುದು ನಿಮ್ಮ ವೈಫಲ್ಯ ಎಂದು ಚುಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.