ADVERTISEMENT

ಕೃತಕ ಗೊಬ್ಬರದಿಂದ ಮಣ್ಣಿನ ಸಾರ ಕೊರತೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 10:25 IST
Last Updated 19 ಜುಲೈ 2012, 10:25 IST

ಗುಬ್ಬಿಗಾ(ನರಸಿಂಹರಾಜಪುರ):  ಭೂಮಿಗೆ ಸಮತೋಲನಾ ಗೊಬ್ಬರ ನೀಡದಿರುವುದರಿಂದ ಹಾಗೂ ಸಾವಯವ ಗೊಬ್ಬರದ ಬಳಕೆ ಕಡಿಮೆ ಯಾಗಿರುವುದರಿಂದ ಎ್ಲ್ಲಲ ಮಣ್ಣಿನಲ್ಲೂ ಲಘು ಪೋಷಕಾಂಶದ ಕೊರತೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ  ಕೆ.ಓಂಕಾರಪ್ಪ ತಿಳಿಸಿದರು.

ತಾಲ್ಲೂಕಿನ ಗುಬ್ಬಿಗಾ ಗ್ರಾಮದಲ್ಲಿ ಮಂಗಳವಾರ ಭೂ ಚೇತನದಡಿ  ನಡೆದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.ಭೂಮಿಗೆ ಪುನಶ್ಚೇತನ ನೀಡಲು ಬಿತ್ತನೆ ಬೀಜಗಳನ್ನು, ಲಘುಪೋಷಕಾಂಶಗಳನ್ನು, ಕೃಷಿ ಸುಣ್ಣ, ಜೀವಾಣುಗೊಬ್ಬರ, ಸಸ್ಯ ಸಂರಕ್ಷಣಾ ಔಷಧಿ ಹಾಗೂ ಕಳೆನಾಶಕಗಳನ್ನು ಭೂಚೇತನ ಕಾರ್ಯಕ್ರಮದಡಿ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ.
 
ಜಿಲ್ಲೆಯಾದ್ಯಂತ ಕೃಷಿ ಭೂಮಿಗೆ ಸತು, ಬೋರಾನ್ ಹಾಗೂ ಸುಣ್ಣವನ್ನು ಶಿಫಾರಸ್ಸಿಗೆ ಅನುಗುಣವಾಗಿ ಬಳಸುವುದರಿಂದ ಮತ್ತು ಉತ್ತಮ ಬಿತ್ತನೆ ಬೀಜ, ಶಿಫಾರಸು ಮಾಡಿದ ರಸಗೊಬ್ಬರ, ಅಗತ್ಯವಿದ್ದಾಗ ಸಸ್ಯ ಸಂರಕ್ಷಣೆ ಕೈಗೊಳ್ಳುವುದರಿಂದ ಅಧಿಕ ಇಳುವರಿ ಪಡೆಯುವುದರೊಂದಿಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದರು.

ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಶಿವಮೂರ್ತಿ ಮಾತನಾಡಿ, ಕೃಷಿಯಲ್ಲಿ ಕೂಲಿ ಆಳುಗಳ ಸಮಸ್ಯೆಇರುವುದರಿಂದ ಯಾಂತ್ರೀಕರಣಕ್ಕೆ ಆದ್ಯತೆ ನೀಡಬೇಕು. ಎಲ್ಲಾ ಬೆಳೆಗಳಿಗೂ ಶಿಫಾರಸು ಮಾಡಿದ ರಸಗೊಬ್ಬರ ಬಳಸುವುದರಿಂದ ಅನಗತ್ಯವಾಗಿ ಪೋಷಾಕಾಂಶಗಳ ಬಳಕೆಯನ್ನು ತಪ್ಪಿಸ ಬಹುದಾಗಿದೆ. 25 ರಿಂದ 30 ಜನ ಸಮಾನ ಮನಸ್ಸಿನ ರೈತರು ಒಟ್ಟುಗೂಡಿ ರೈತ ಶಕ್ತಿ ಗುಂಪನ್ನು ರಚಿಸಿಕೊಂಡು ಕೃಷಿಗೆ ಅಗತ್ಯವಾದ ಯಂತ್ರೋಪ ಕರಣಗಳನ್ನು ಈ ಗುಂಪಿನ ಮೂಲಕ ಪಡೆದು ಕೊಳ್ಳಬಹುದು.
 
ಅದಕ್ಕೆ ಬೇಕಾದ ಎಲ್ಲ ಮಾಹಿತಿಗಳನ್ನು ರೈತ ಅನುವುಗಾರರ ಮೂಲಕ ನೀಡಲಾಗುವುದು ಎಂದರು. ಗ್ರಾಮಸ್ಥರಾದ ನಾಗರಾಜ್, ಕೃಷಿ ಇಲಾಖೆಯ ನವೀನ್, ಆತ್ಮ ಯೋಜನೆ ವಿಷಯ ತಜ್ಞೆ ಬಿ.ಪಿ.ವೀಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.