ADVERTISEMENT

ಕೃಷಿ ಇಲಾಖೆ ಸೌಲಭ್ಯ ರೈತರಿಗೆ ತಲುಪಲಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:40 IST
Last Updated 18 ಫೆಬ್ರುವರಿ 2011, 10:40 IST

ಶೆಟ್ಟಿಕೊಪ್ಪ(ಎನ್.ಆರ್.ಪುರ):  ಕೃಷಿ ಇಲಾಖೆಯ ಸೌಲಭ್ಯಗಳು ಗ್ರಾಮ ಪಂಚಾಯಿತಿ ಮೂಲಕ ಎಲ್ಲಾ ರೈತರಿಗೂ ತಲುಪುವಂತಾಗ ಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಎಸ್.ಶಾಂತಕುಮಾರ್ ತಿಳಿಸಿದರು.ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದ ಕಡಹಿನಬೈಲು ಗ್ರಾಮಪಂಚಾಯಿತಿ  ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೃಷಿ ಇಲಾಖೆಯ ಸೌಲಭ್ಯ ಉಳ್ಳವರ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗದೇ ಅರ್ಹ ರೈತರಿಗೆ ಸಿಗಬೇಕು. ರೈತರಿಗೆ ಈ ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುವಂತೆ ಇಲಾಖೆ ಗಮನಹರಿಸ ಬೇಕೆಂದರು.ಕಡಹಿನ ಬೈಲು ಗ್ರಾಮ ಪಂಚಾಯಿತಿ ಸದಸ್ಯ ಎ.ಎಲ್.ಮಹೇಶ್ ಮಾತನಾಡಿ, ಬಿಪಿಎಲ್ ಕಾರ್ಡ್‌ಗಳಲ್ಲಾಗಿರುವ ಸಣ್ಣ ಪುಟ್ಟ ಗೊಂದಲಗಳಿಂದ ಕೆಲ ಬಡವರಿಗೆ ಪಡಿತರ ಆಹಾರ ಸಾಮಾಗ್ರಿ ಸಿಗುತ್ತಿಲ್ಲ ಈ ಸಮಸ್ಯೆ ಬಗೆಹರಿಸಲು ಇಲಾಖೆ ಗಮನ ಹರಿಸಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜುವಿಜಯ್ ಮಾತನಾಡಿ, ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಂದಾಯ, ನೀರ ಕಂದಾಯ  ಅಂದಾಜು ರೂ.4ಲಕ್ಷ ಬಾಕಿ ಇರುವುದರಿಂದ  ಗ್ರಾಮದ ವ್ಯಾಪ್ತಿಯಲ್ಲಿ ಸಮರ್ಪಕ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯ ಕೊಳ್ಳಲು ಸಾಧ್ಯವಾಗುತ್ತಿಲ್ಲ ಕಂದಾಯ ಕಟ್ಟುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು, ಗುಡಿಸಲು ಪಟ್ಟಿ ತಯಾರಿಸುವಲ್ಲಿ ಹಾಗೂ ಮನೆ ಕಂದಾಯ ಬಿಟ್ಟು ಹೋಗಿದ್ದರೆ ಕೂಡಲೇ ಗ್ರಾಮಪಂಚಾಯಿತಿ ಸಂಪರ್ಕಿಸ ಬೇಕೆಂದು ಮನವಿ ಮಾಡಿದರು.

ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಗ್ರೇಸಿಬಾಬು  ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಂಜು ಟಿ ಏಲಿಯಾಸ್, ಸದಸ್ಯರಾದ ಮಳಲಿ ಶ್ರೀನಿ ವಾಸ್, ಚಂದ್ರಶೇಖರ್, ಅನಿತ, ನೋಡಲ್ ಅಧಿಕಾರಿ ವಾಸಂತಿ, ಕೃಷಿ ಇಲಾಖೆಯ ಶ್ರೀಧರ್, ಗ್ರಾಮ ಲೆಕ್ಕಿಗ ಸುನೀಲ್‌ಕುಮಾರ್, ತಾಪಂ ಸದಸ್ಯೆ ಗಾಯತ್ರಿ ಇದ್ದರು.ಪಂಚಾಯಿತಿ ವ್ಯಾಪ್ತಿಯ ಆರಂಬಳ್ಳಿ, ನೆರ್ಲೆಕೊಪ್ಪ, ಬಾಳೆಕೊಪ್ಪ, ಸೂಸಲ ವಾನಿ, ಹಳೇದಾನಿವಾಸ,ವಿಠಲ ಗ್ರಾಮ ಗಳಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ನಡೆಸಲಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.