ADVERTISEMENT

ಕೆ.ಎಂ.ರಸ್ತೆ ವಿಸ್ತರಣೆ: ಗುರುತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 10:33 IST
Last Updated 19 ಡಿಸೆಂಬರ್ 2012, 10:33 IST

ಮೂಡಿಗೆರೆ: ಪಟ್ಟಣದಲ್ಲಿ ಹಾದು ಹೋಗಿರುವ ಕಡೂರು-ಮಂಗಳೂರು ರಾಜ್ಯ ಹೆದ್ದಾರಿಯನ್ನು, ಪಟ್ಟಣದ ವ್ಯಾಪ್ತಿಯಲ್ಲಿ ವಿಸ್ತರಣೆಗೊಳಿಸಲು, ತೆರವುಗೊಳಿಸಬೇಕಾದ ಕಟ್ಟಡಗಳಿಗೆ ಮಂಗಳವಾರ ಪಟ್ಟಣ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾರ್ಕಿಂಗ್ ಕಾರ್ಯ ನಡೆಸಿದರು.

ಕಳೆದ ಎರಡು ತಿಂಗಳ ಹಿಂದೆಯೇ ಕೆ.ಎಂ. ರಸ್ತೆ ವಿಸ್ತರಣೆಗಾಗಿ ಸಾರ್ವಜನಿಕರು, ಜನಪ್ರತಿನಿಧಿಗಳು, ರಸ್ತೆಬದಿಯ ನಿವಾಸಿಗಳ ಅಂತಿಮ ಸಭೆ ನಡೆಸಿ ಈಗಿರುವ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ 45 ಅಡಿ ಸೇರಿದಂತೆ ಒಟ್ಟು 90 ಅಡಿ ತೆರವುಗೊಳಿಸಿ, ಅದರಲ್ಲಿ  ಎರಡೂ ಬದಿಯಲ್ಲಿ 3 ಅಡಿಯ ಒಳಚರಂಡಿ, 6 ಅಡಿಯ ಪಾದಚಾರಿ ರಸ್ತೆಯನ್ನು ನಿರ್ಮಿಸಿ, ಉಳಿದ ಜಾಗದಲ್ಲಿ ದ್ವಿಮುಖ ರಸ್ತೆಯನ್ನು ನಿರ್ಮಾಣ ಮಾಡಲು ಸರ್ವಾನುಮತದಿಂದ ಒಪ್ಪಲಾಗಿತ್ತು.

ಆದರೆ ಸಭೆ ಮುಗಿದು ಎರಡು ತಿಂಗಳು ಕಳೆದರೂ ರಸ್ತೆ ಮಾರ್ಕಿಂಗ್ ಕಾರ್ಯ ನಡೆಸದ ಇಲಾಖೆಗಳ ವಿರುದ್ಧ ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದರಿಂದ ಮಂಗಳವಾರ ಪಟ್ಟಣ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾರ್ಕಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು.

ಮಾರ್ಕಿಂಗ್ ಕಾರ್ಯದ ಮೊದಲ ದಿನ ಪಟ್ಟಣದ ಎಂ.ಜಿ.ಎಂ. ಆಸ್ಪತ್ರೆಯ ಮುಂಭಾಗದಿಂದ ತೆರವುಗೊಳಿಸಬೇಕಾದ ಕಟ್ಟಡಗಳಿಗೆ ಸಭೆಯ ತೀರ್ಮಾನದಂತೆ ರಸ್ತೆಯ ಮಧ್ಯಭಾಗದಿಂದ 45 ಅಡಿಗೆ ಗುರುತು ಮಾಡಲಾಯಿತು. ಮಾರ್ಕಿಂಗ್ ಕಾರ್ಯ ಗಂಗನಮಕ್ಕಿಯನ್ನು ಮುಟ್ಟಿದ ತಕ್ಷಣ, ತೆರವುಗೊಳಿಸಬೇಕಾದ ಕಟ್ಟಡದ ಮಾಲೀಕರಿಗೆ ಕಾಲಾವಕಾಶ ನೀಡಿ, ತೆರವುಗೊಳಿಸಬೇಕಾದ ಸರ್ಕಾರಿ ಕಟ್ಟಡಗಳನ್ನು ಮೊದಲಿಗೆ ತೆರವುಗೊಳಿಸಲಾಗುವುದು ಎಂದು ಹೇಳಿದರು.

ಅಷ್ಟರೊಳಗೆ ಕಟ್ಟಡದ ಮಾಲೀಕರು ಸ್ವಇಚ್ಛೆ ಯಿಂದ ತೆರವುಗೊಳಿತ್ತಾರೆ. ನಂತರ ನೂತನ ಯೋಜನೆಯಂತೆ ಒಳಚರಂಡಿ, ಪಾದಚಾರಿ ರಸ್ತೆ ಮತ್ತು ದ್ವಿಮುಖ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಮಾರ್ಕಿಂಗ್ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ತಿಳಿಸಿದರು.

ಮೊದಲ ದಿನ ನಡೆದ ಮಾರ್ಕಿಂಗ್ ಕಾರ್ಯವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎ. ಶೇಷಗಿರಿ, ಉಪಾಧ್ಯಕ್ಷೆ ಸುಮಾಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ನೇಪಾ ಆದಿತ್ಯ ಸ್ಥಳಕ್ಕೆ ಭೇಟಿ ನೀಡಿ, ಮಾರ್ಕಿಂಗ್ ಕಾರ್ಯವನ್ನು ವೀಕ್ಷಿಸಿದರು.

ಮಾರ್ಕಿಂಗ್ ಕಾರ್ಯದಲ್ಲಿ ಪಟ್ಟಣ ಪಂಚಾಯಿತಿ ಇಂಜಿನೀಯರ್ ಜಯಸಿಂಹನಾಯಕ್, ಲೋಕೋಪಯೋಗಿ ಇಲಾಖೆಯ ಇಂಜಿನೀಯರ್ ವೆಂಕಟೇಶ್ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.