ADVERTISEMENT

ಗಾಂಧೀವಾದಿಗೆ ಗೌರವದ ಗರಿ

ಗೋವಿಂದೇಗೌಡರಿಗೆ ತುಮಕೂರು ವಿ.ವಿ. ಗೌರವ ಡಾಕ್ಟರೇಟ್

ಜಿನೇಶ್ ಇರ್ವತ್ತೂರು
Published 11 ಜನವರಿ 2014, 6:06 IST
Last Updated 11 ಜನವರಿ 2014, 6:06 IST

ಕೊಪ್ಪ: ಹಿರಿಯ ಗಾಂಧೀವಾದಿ, ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡರಿಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲು  ತೀರ್ಮಾನಿಸಿದೆ. ಇದೇ 12ರಂದು ನಡೆಯುವ ವಿಶ್ವ ವಿದ್ಯಾಲಯದ ಘಟಿಕೋತ್ಸವ ದಲ್ಲಿ ರಾಜ್ಯಪಾಲ ಹಂಸರಾಜ್ ಭಾರ ದ್ವಾಜ್ ಅವರು ಗೋವಿಂದೇ ಗೌಡರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವರು.

ನರಸಿಂಹರಾಜಪುರ ತಾಲ್ಲೂಕಿನ ಕಾನೂರು ಸಮೀಪದ ಹಿಣಚಿಯ ಗಿಡ್ಡೇಗೌಡ, ಬೋಬಮ್ಮ ದಂಪತಿಗಳ ಪುತ್ರನಾಗಿ 1926ರಲ್ಲಿ ಜನಿಸಿದ ಗೋವಿಂದೇಗೌಡರು. 1952ರಲ್ಲಿ ಕೊಪ್ಪ ಪುರಸಭೆಯ ಸದಸ್ಯರಾಗಿ, ಪ್ರಥಮ ಅಧ್ಯಕ್ಷರಾಗಿ ಆಯ್ಕೆ ಯಾಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು.

ಬಳಿಕ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ, ಕೃಷಿ ವ್ಯವಸಾಯೋತ್ಪನ್ನ ಸಮಿತಿ ಅಧ್ಯಕ್ಷರಾಗಿ ತಾಲ್ಲೂಕಿನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟ ಗೌಡರು, 1983ರಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ರಾಗಿ ಮೊದಲ ಬಾರಿ ರಾಜ್ಯ ವಿಧಾನಸಭೆ ಪ್ರವೇಶ ಪಡೆದರು. ಮೂರು ಬಾರಿ ಶಾಸಕ ರಾಗಿದ್ದ ಅವರು 1985ರಲ್ಲಿ ಪ್ರಾಥಮಿಕ ಮತ್ತು ವಯಸ್ಕರ ಶಿಕ್ಷಣ ರಾಜ್ಯ ಸಚಿವರಾಗಿ,1988ರಲ್ಲಿ ಕಾರ್ಮಿಕ ಸಚಿವರಾಗಿ, 1995ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸರಿಸುಮಾರು ಐದು ದಶಕಗಳ ಕಾಲ ರಾಜಕೀಯ ರಂಗದಲ್ಲಿದ್ದರೂ ಯಾವುದೇ ಕಳಂಕವಿಲ್ಲದೆ ಪರಿಶುದ್ಧ ರಾಜಕಾರಣ ನಡೆಸಿದ ಅವರು, 1999ರಲ್ಲಿ  ಸ್ವಯಂ ನಿವೃತ್ತಿ ಘೋಷಿಸುವ ಮೂಲಕ ಮಾದರಿ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದರು.

ಶಿಕ್ಷಣ ಸಚಿವರಾಗಿ ಅವರು ಇಲಾಖೆಯಲ್ಲಿ ಕೈಗೊಂಡ ರೋಸ್ಟರ್ ಪದ್ಧತಿ, ಕೌನ್ಸೆಲಿಂಗ್ ವಿಧಾನದಂತಹ ಸುಧಾರಣಾ ಕ್ರಮಗಳು, ಲಂಚ, ರುಷುವತ್ತಿಗೆ ಆಸ್ಪದವಿಲ್ಲದೆ 1.20 ಲಕ್ಷ ಶಿಕ್ಷಕರ ನೇಮಕಾತಿಯಲ್ಲಿ ಅನುಸ ರಿಸಿದ ಪಾರದರ್ಶಕ ನಡೆಯಿಂದ ಲಕ್ಷಾಂತರ ಬಡ ಉದ್ಯೋಗಾ ಕಾಂಕ್ಷಿಗಳ ಬಾಳಿನಲ್ಲಿ ಹೊಸಬೆಳಕು ಮೂಡಲು ಸಾಧ್ಯವಾಗಿದ್ದು, ರಾಜ್ಯ ಸರ್ಕಾರದ ಮಟ್ಟಿಗೆ ಹೊಸ ಕ್ರಾಂತಿಯೆಂದೇ ಪರಿಗಣಿಸಲಾದ ಈ ಸಾಧನೆ ಜನಮಾನಸದಲ್ಲಿ ಚಿರಸ್ಥಾ ಯಿಯಾಗಿ ಉಳಿದಿದೆ. 

ಇಂತಹ ಹಲವು ಸಾಧನೆಗಳ ಮೂಲಕ ರಾಜ್ಯ ರಾಜಕಾರಣದಲ್ಲಿ ಮೌನ ಕ್ರಾಂತಿ ಉಂಟುಮಾಡಿದ ಗೋವಿಂದೇ ಗೌಡರಿಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿವೆ. ತುಮಕೂರು ವಿವಿ ಗೌರವ ಡಾಕ್ಟರೇಟ್‌ ಪ್ರಕಟಿಸಿರುವ ಬಗ್ಗೆ ‘ಪ್ರಜಾವಾಣಿ’ ಶುಕ್ರವಾರ ಅವರನ್ನು ಸಂಪರ್ಕಿಸಿದಾಗ ‘ಹಿಂದೆ ಇಂತಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದವರನ್ನು ಕಂಡು ಖುಷಿಪಟ್ಟಿದ್ದೆ. ಈಗ ನನಗೇ ಅಂತಹ ಗೌರವ ನೀಡಿರುವುದಕ್ಕೆ ಸಹಜವಾಗಿ ಸಂತಸವಾಗಿದೆ. ನನಗೆ ವಯಸ್ಸಾಗಿದೆ. ಓಡಾಡಲು ಕಷ್ಟವಾಗುತ್ತಿದೆ. ಆದರೂ ಅವರು ಒಳ್ಳೆಯ ಮನಸ್ಸಿನಿಂದ ನೀಡಿರುವ ಗೌರವ ಸ್ವೀಕರಿಸುವ ಬದ್ಧತೆಯಿಂದ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು ವಿನೀತರಾಗಿ ನುಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.