ADVERTISEMENT

ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿ-ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 9:35 IST
Last Updated 5 ಜುಲೈ 2012, 9:35 IST

ಕಡೂರು: ಕಳೆದ ವರ್ಷ ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕಿಗೆ ಪುನಃ ಬರಗಾಲ ಆವರಿಸುವ ಸೂಚನೆಗಳು ಕಾಣುತ್ತಿದೆ. ಆದ್ದರಿಂದ ಜಿ.ಪಂ. ಎಂಜಿನಿಯರ್ ವಿಭಾಗದ ಅಧಿಕಾರಿಗಳು ಉಳಿದ ಕಾಮಗಾರಿ ಕೆಲಸಗಳನ್ನು ತ್ವರಿತವಾಗಿ ಮಾಡಬೇಕು ಜೊತೆಯಲ್ಲಿ ಗುಣ ಮಟ್ಟದ ಕಾಮಗಾರಿಗೆ ಒತ್ತು ನೀಡಿ ಎಂದು ಶಾಸಕ ಡಾ.ವೈ.ಸಿ. ವಿಶ್ವನಾಥ್ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಪಟ್ಟಣದ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗದ ಕಚೇರಿಯಲ್ಲಿ ಬುಧವಾರ ನಿರ್ಮಿತಿ, ಭೂಸೇನಾ ನಿಗಮ, ಎಂಜಿನಿಯರ್‌ಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

ಸಮುದಾಯ ಭವನ ನಿರ್ಮಾಣ, ಗ್ರಾಮಗಳಲ್ಲಿನ ರಸ್ತೆ ದುರಸ್ತಿ, ದೇವಾಲಯಗಳ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ಬಿಡುಗಡೆಯಾಗಿರುವ ಅನುದಾನದ ಕಾಮಗಾರಿಗಳು ಯಾವ ಸ್ಥಿತಿಯಲ್ಲಿವೆ, ಕಾಮಗಾರಿ ಕುಂಠಿತವಾಗಿರುವ ಮಾಹಿತಿ ಪಡೆದು ಕಾಮಗಾರಿಗಳು ತ್ವರಿತವಾಗಿ ಆಗಬೇಕು ಮತ್ತು ಗುಣಮಟ್ಟದ ಕೆಲಸ ನಡೆಯಬೇಕು ಎಂದು ಎಂಜಿನಿಯರ್‌ಗಳಿಗೆ ಸಲಹೆ ನೀಡಿದರು.

1.96 ಕೋಟಿ ರೂ. ಗಳ ಅನುದಾನದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಎಇಇ ಪ್ರಭಾಕರ್‌ರಾವ್ ಸಮಗ್ರ ಮಾಹಿತಿಯ ವರದಿಯನ್ನು ಶಾಸಕರಿಗೆ ನೀಡಿದರು.
ಎಸ್‌ಸಿಪಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಚೌಳಹಿರಿ ಯೂರು ಹರಿಜನ ಕಾಲೋನಿ ಸಾರ್ವ ಜನಿಕ ಸಮುದಾಯ ಭವನ ನಿರ್ಮಾಣ, ಬಿ. ಬಸವನಹಳ್ಳಿ ಲಂಬಾಣಿ ತಾಂಡ್ಯಕ್ಕೆ ಹೋಗುವ ರಸ್ತೆ ನಿರ್ಮಾಣ, ಎಮ್ಮೆದೊಡ್ಡಿ ಕೊರಚರ ಹಟ್ಟಿ ಸಮುದಾಯ ಭವನ, ಸಿಂಗಟಗೆರೆ ಪ್ರಥಮ ದರ್ಜೆಕಾಲೇಜು ಕಟ್ಟಡದ ಮುಂದುವರೆದ ಕಾಮಗಾರಿ, ಯಳ್ಳಂಬಳಸೆ ಬೀರಲಿಂಗೇಶ್ವರ, ರುದ್ರೇಶ್ವರಸ್ವಾಮಿ, ಖಂಡಗದಹಳ್ಳಿ ಸೋಮೇಶ್ವರ ಸ್ವಾಮಿ, ವಗರೇಹಳ್ಳಿ ರಂಗನಾಥಸ್ವಾಮಿ, ಗಿರಿಯಾಪುರದ ಗುರುಕುಮಾರಶ್ರಮ, ಚಟ್ನಹಳ್ಳಿ, ಬೀರೂರು ಶಿವಾನಂದಾಶ್ರಮ ಸಮು ದಾಯ ಭವನ ಕಟ್ಟಡಗಳ ಕಾಮಗಾರಿ ಮುಗಿದಿರುವುದಾಗಿ ಎಂಜಿನಿಯರ್ ತಮ್ಮಯ್ಯ ತಿಳಿಸಿದರು.

ಭೂಸೇನ ನಿಗಮದಿಂದ ತಾಲ್ಲೂಕಿನ 7 ಸುವರ್ಣಗ್ರಾಮಗಳ ಅಭಿವೃದ್ದಿಗೆ 3.12 ಕೋಟಿ ಹಣ ಬಿಡುಗಡೆಯಾಗಿ ಮೂರು ಗ್ರಾಮಗಳ ಕಾಮಗಾರಿಯ ಕೆಲಸ ಮಾತ್ರ ಸ್ವಲ್ಪ ಬಾಕಿ ಇದೆ. ಆಸಂದಿ ಗ್ರಾಮದಲ್ಲಿ 45.54 ಲಕ್ಷ,ಬಾಸೂರು 28.78 ಲಕ್ಷ, ಗರ್ಜೆ 45.36, ಸಿಂಗಟಗೆರೆ 55.48, ಯಳ್ಳಂಬಳಸೆ 50.76, ಕುಂಕಾನಾಡು 38.14, ಚಿಕ್ಕಂಗಳ 48.38 ಲಕ್ಷ ರೂಗಳಲ್ಲಿ ಕೆಲಸ ನಡೆದಿರುವುದಾಗಿ ನಿಗಮದ ಎಂಜಿನಿಯರ್ ಭಾಸ್ಕರ್ ಮಾಹಿತಿ ನೀಡಿದರು.

ಕೆರೆಗಳ ಹೂಳು ತೆಗೆಯಲು ಬಿಡುಗಡೆಯಾದ 5 ಕೋಟಿಯಲ್ಲಿ ಒಂದು ಕೋಟಿ ಎಂಐಗೆ ನೀಡಿದ್ದು ಉಳಿದ 4 ಕೋಟಿಗಳಲ್ಲಿ ತಾಲ್ಲೂಕಿನ 37 ಕೆರೆಗಳ ಹೂಳು ತೆಗೆಯಲಾಗಿದ್ದು, 1.84 ಕೋಟಿ ಹಣವನ್ನು ಈಗಾಗಲೇ ನೀಡಲಾಗಿದ್ದು ಉಳಿದ ಬಾಕಿ ಹಣ ಬಿಡುಗಡೆಯಾಗಬೇಕಾಗಿದೆ ಎಂದು ಪ್ರಭಾಕರ್‌ರಾವ್ ತಿಳಿಸಿದರು.

ಸಭೆಯಲ್ಲಿ  ಎಂಜಿನಿಯರ್‌ಗಳಾದ ಪ್ರಭಾಕರ್‌ರಾವ್, ತಮ್ಮಯ್ಯ, ಮಲ್ಲಪ್ಪ, ರವಿಶಂಕರ್, ರಘುರಾಮ್, ಗೋವಿಂದಪ್ಪ, ನಾಗರಾಜು, ಸುನಿಲ್ ಮತ್ತು ಭೂಸೇನಾ ನಿಗಮದ ಭಾಸ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.