ಚಿಕ್ಕಮಗಳೂರು: ಗ್ರಾಮೀಣ ಸೇವೆಯಲ್ಲಿ ತೊಡಗಿರುವ ಅಂಚೆ ನೌಕರರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇವರಿಗೆ ಸೇವಾ ಷರತ್ತು ಮತ್ತು ಸಾರಿಗೆ ಭತ್ಯೆ ನೀಡಬೇಕೆಂಬ ದೀರ್ಘ ಕಾಲದ ಬೇಡಿಕೆ ಈಡೇರಿಸಿಕೊಳ್ಳಲು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನೌಕರರು ಸಜ್ಜಾಗಬೇಕು ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಎಸ್.ಎಸ್.ಮಹಾದೇವಯ್ಯ ಕರೆ ನೀಡಿದರು.
ನಗರದಲ್ಲಿ ಭಾನುವಾರ ನಡೆದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಚಿಕ್ಕಮಗಳೂರು ವಿಭಾಗದ 24ನೇ ದ್ವೈವಾರ್ಷಿಕ ಅಧಿವೇಶನದಲ್ಲಿ ಅವರು ಮಾತನಾಡಿದರು.
ಅಂಚೆ ಇಲಾಖೆಗೆ 150 ವರ್ಷಗಳ ಇತಿಹಾಸವಿದೆ. ಗ್ರಾಮೀಣ ನೌಕರರೆ ಅಂಚೆ ಇಲಾಖೆಗೆ ಅಡಿಪಾಯ. ಅಂಚೆ ನೌಕರರು 4ನೇ ವೇತನ ಆಯೋಗದವರೆಗೂ ಕೇವಲ 450ರೂ. ಮಾತ್ರ ವೇತನ ಪಡೆಯುತ್ತಿದ್ದರು. ಇದನ್ನೂ ಸಂಬಳವೆಂದು ಪರಿಗಣಿಸುತ್ತಿಲ್ಲ. ರಜೆ ನೀಡಲಾಗುತ್ತಿದ್ದರೂ ರಜೆಯೆಂದು ಪರಿಗಣಿಸುತ್ತಿಲ್ಲ. ಈ ಸಮೂಹವನ್ನು `ಎಕ್ಸಟ್ರಾ ಡಿಪಾರ್ಟ್‌ಮೆಂಟ್ ಎಂಪ್ಲಾಯಿಸ್' ಎಂದು ಪರಿಗಣಿಸಲಾಗುತ್ತಿದೆ. ಇ.ಡಿ. ಇಲ್ಲದಿದ್ದರೆ ಅಂಚೆ ಇಲಾಖೆ ಸುಲಭವಾಗಿ ಖಾಸಗೀಕರಣಕ್ಕೆ ತುತ್ತಾಗುತ್ತಿತ್ತು. ಟೆಲಿಗ್ರಾಂ ಅನ್ನು ಅಂಚೆ ಇಲಾಖೆಯಿಂದ ಬೇರ್ಪಡಿಸಿದ ನಂತರ ಆ ಸೇವೆಯೇ ಇಂದು ರದ್ದಾಗಿದೆ ಎಂದು ವಿಷಾದಿಸಿದರು.
8 ಗಂಟೆ ಸೇವಾವಧಿ, ವೈಜ್ಞಾನಿಕವಾಗಿ ಸಮಯ ನಿಗದಿ ಸೇರಿದಂತೆ ನ್ಯಾಯಯುತ ಬೇಡಿಕೆಗಳನ್ನು ಯಾರೂ ಈವರೆಗೂ ತಿರಸ್ಕರಿಸಿಲ್ಲ. ಆದರೆ ಪುರಸ್ಕರಿಸಿಯೂ ಇಲ್ಲ. ನಮ್ಮ ಬೇಡಿಕೆಗಳ ಬಗ್ಗೆ ಅಧಿಕಾರಶಾಹಿ ವಿಳಂಬನೀತಿ ಪ್ರಜ್ಞಾಪೂರ್ವಕವಾಗಿ ಅನುಸರಿಸುತ್ತಿದೆ. ಸಂಘಟನೆ ಮತ್ತು ಮುಷ್ಕರದಿಂದ ಬೇಡಿಕೆಗಳು ಸ್ವಲ್ಪಮಟ್ಟಿಗೆ ಈಡೇರಿವೆ. ಉಳಿದ ನ್ಯಾಯಯುತ ಬೇಡಿಕೆಗಳಿಗಾಗಿ ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದರು.
ಶಾಸಕ ಸಿ.ಟಿ.ರವಿ ಅಧಿವೇಶನದಲ್ಲಿ ಮಾತನಾಡಿ, ಗ್ರಾಮೀಣ ಅಂಚೆ ನೌಕರರ ಸೇವೆ ಶ್ಲಾಘನೀಯ. ನೌಕರರ ಬೇಡಿಕೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಬೆಂಗಳೂರು ವಲಯ ಕಾರ್ಯದರ್ಶಿ ಕೆ.ಸಿ.ಅಣ್ಣಪ್ಪ ಮಾತನಾಡಿ, ತಲಸ್ಪರ್ಶಿ ನೌಕರರ ಅನುಭವ ಪಡೆದ ಯೋಜನೆಗಳು ಮಾತ್ರ ಇಲಾಖೆಯಲ್ಲಿ ಯಶಸ್ವಿಯಾಗಲು ಸಾಧ್ಯ. ದೊಡ್ಡ ಹುದ್ದೆಗಳನ್ನು ಹೆಚ್ಚಿಸಿ ಅವರ ವೇತನ ಪರಿಷ್ಕರಿಸಲಾಗುತ್ತಿದೆ. ಆದರೆ, ಗ್ರಾಮೀಣ ನೌಕರರ ಬಗ್ಗೆ ಇಲಾಖೆ ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.
ಗ್ರಾಮೀಣ ಅಂಚೆ ನೌಕರರಿಗೆ ಬಿ.ಪಿ.ಎಲ್.ಕಾರ್ಡ್ ನೀಡಬೇಕೆಂದು ಚಿಕ್ಕಮಗಳೂರು ಜಿಲ್ಲಾ ಶಾಖೆ ಪ್ರಯತ್ನಿಸುತ್ತಿದೆ. ಈ ಬೇಡಿಕೆ ಈಡೇರುವ ಹಂತದಲ್ಲಿದೆ ಎಂದರು.
ಅಧಿವೇಶನ ಉದ್ಘಾಟಿಸಿದ ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್‌ಮೀಗಾ ಮಾತನಾಡಿ, ಗ್ರಾಮೀಣ ಅಂಚೆ ನೌಕರರು ಒಗ್ಗಟ್ಟು ಕಾಯ್ದುಕೊಂಡು, ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಬೇಕು ಎಂದರು.
ಚಿಕ್ಕಮಗಳೂರು ವಿಭಾಗೀಯ ಅಧ್ಯಕ್ಷ ಬಿ.ಪಿ.ಮಂಜಪ್ಪ, ಬೆಂಗಳೂರು ವಲಯ ಕಾರ್ಯದರ್ಶಿ ಪಿ.ಮಲ್ಲಿಕಾರ್ಜುನ, ಸಹ ಕಾರ್ಯದರ್ಶಿ ಶಿವಕುಮಾರ್, ಶಿವಮೊಗ್ಗ ವಲಯ ಅಧ್ಯಕ್ಷ ಪ್ರಹ್ಲಾದರಾವ್, ಉಡುಪಿ ವಲಯ ಕಾರ್ಯಾಧ್ಯಕ್ಷ ವಿಜಯನಾಯರಿ, ಹಾಸನ ವಿಭಾಗ ಕಾರ್ಯದರ್ಶಿ ಶಿವಾಜಿ, ತುಮಕೂರು ವಲಯಾಧ್ಯಕ್ಷ ಲಕ್ಷ್ಮಿನಾರಾಯಣ, ಜೋಸೆಫ್, ಸಿ.ಎಂ.ಶ್ರೀನಿವಾಸ, ಜೆ.ಬಿ.ಪುಟ್ಟಸ್ವಾಮಿ, ಎನ್.ತಿಪ್ಪೇಸ್ವಾಮಿ, ಆರ್.ಮಂಜುನಾಥ, ಜೋಸೆಫ್ ಬ್ರಿಟ್ಟೊ ಇನ್ನಿತರರು ಇದ್ದರು. ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಮರಣ ಹೊಂದಿದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.