ADVERTISEMENT

ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 5:15 IST
Last Updated 20 ಅಕ್ಟೋಬರ್ 2012, 5:15 IST

ಹಿರೇನಲ್ಲೂರು(ಕಡೂರು): ಗ್ರಾಮೀಣ ಪ್ರದೇಶದಲ್ಲಿ ಕಡು ಬಡವರು ದುಬಾರಿ ವೆಚ್ಚದಲ್ಲಿ ಚಿಕಿತ್ಸೆಯನ್ನು ಪಡೆಯಲು ಕಷ್ಟ. ಆದ್ದರಿಂದ ಅವರ ಆರೋಗ್ಯವನ್ನು ತಪಾಸಣೆ ನಡೆಸಲು ಲಯನ್ಸ್ ನಂತಹ ಅಂತರಾಷ್ಟ್ರೀಯ ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಚಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಹಿರೇನಲ್ಲೂರು ಗ್ರಾಮದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಕಡೂರು ಲಯನ್ಸ್ ಕ್ಲಬ್  ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಗ್ರಾಮೀಣರಿಗೆ  ಹೃದಯ ಮತ್ತು ದಂತ, ಕಿವಿ ಮೂಗು ಗಂಟಲು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನ ವಿಮ್ಸ ಆಸ್ಪತ್ರೆಯ ತಜ್ಞ ವೈದ್ಯ ಡಾ.ನಾಗನಾಥ್ ಮಾತನಾಡಿ ಒತ್ತಡದ ಜೀವನ ಶೈಲಿಯಿಂದ ಮಾನಸಿಕ ಉದ್ವೇಗಕ್ಕೆ ಪ್ರತಿಯೊಬ್ಬರು ಒಳಗಾಗುತ್ತಿರುವುದು ಸಹಜ. ಅಂತಹ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗದೆ ಉದ್ವೇಗಕ್ಕೆ ಒಳಗಾಗದೆ ಸಂಯಮ ಕಾಪಾಡಿಕೊಂಡಲ್ಲಿ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದರು. 

 ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಭು, ಲಯನ್ಸ್ ಸಂಸ್ಥೆಯ ಅಧ್ಯಕ್ಷ ನರೇಂದ್ರನಾಥ್ ಮಾತನಾಡಿದರು.  ಡಾ.ಪವನ್, ಡಾ.ಪ್ರಭು, ಡಾ.ಗಣೇಶ್‌ಮೂರ್ತಿ, ಡಾ.ದಿನೇಶ್, ಡಾ.ಪೂರ್ಣಿಮ ದಿನೇಶ್ ರೋಗಿಗಳ ತಪಾಸಣೆ, ಚಿಕಿತ್ಸೆ ಮತ್ತು ಸಲಹೆ ನೀಡಿದರು.  

 ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭುಕುಮಾರ್‌ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ಹಾಗೂ ತಜ್ಞ ವೈದ್ಯರು ತಪಾಸಣೆ ನಡೆಸಿದರು. ಲಯನ್ಸ್ ಸಂಸ್ಥೆಯ ರಾಜಣ್ಣ, ನಾಗರಾಜಯ್ಯ, ಶಿವಶಂಕರಪ್ಪ, ಕೆ.ಸಿ.ಗಿರೀಶ್, ನಾಗೇಂದ್ರ, ಸತೀಶ್, ಪೂರ್ಣಿಮ ಮತ್ತು ಅಪೂರ್ವ ದಂತ ಚಿಕಿತ್ಸಾಲಯ, ನಗರದ ಸೃಷ್ಠಿ ಕ್ಲಿನಿಕ್‌ಸದಸ್ಯರು ಮುಂತಾದವರು  ಶಿಬಿರವನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.