ADVERTISEMENT

ಚಿಕ್ಕಮಗಳೂರು ಬಂದ್ ಭಾಗಶಃ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 9:30 IST
Last Updated 23 ಡಿಸೆಂಬರ್ 2017, 9:30 IST
ಸಂಘಟನೆಗಳ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಗಳ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.   

ಚಿಕ್ಕಮಗಳೂರು: ವಿಜಯಪುರ ಜಿಲ್ಲೆಯ ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಕನ್ನಡ, ದಲಿತ, ದಲಿತ ಸಂಘರ್ಷ ಸಮಿತಿ ಪಗ್ರತಿಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ನಗರ ಬಂದ್‌ ಭಾಗಶಃ ಯಶಸ್ವಿಯಾಯಿತು.

ಐ.ಜಿ ರಸ್ತೆ, ಎಂ.ಜಿ.ರಸ್ತೆ, ಮಾರುಕಟ್ಟೆ ರಸ್ತೆ, ಬಾರ್‌ಲೇನ್‌ ರಸ್ತೆ, ನಗರದ ಇತರೆಡೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಬಹುತೇಕ ಶಾಲೆ–ಕಾಲೇಜುಗಳು, ಕೆಲ ಕಚೇರಿ, ಬ್ಯಾಂಕುಗಳು, ಪೆಟ್ರೋಲ್‌ ಬಂಕ್‌ಗಳನ್ನು ಮುಚ್ಚಿಸಿದರು. ಕೆ.ಎಸ್‌.ಆರ್‌.ಟಿ.ಸಿ. ವೃತ್ತ ಮೊದಲಾದ ಕಡೆಗಳಲ್ಲಿ ಟೈರ್‌ಗೆ ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಬ್ಯಾಂಕು, ಕಚೇರಿಗಳನ್ನು ಮುಚ್ಚಿಸಿದ್ದರಿಂದ ಸಿಬ್ಬಂದಿ ಮನೆಗೆ ತೆರಳಿದರು. ಎಂದಿನಂತೆ ಶಾಲೆ–ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿಗಳು ಮನೆಗೆ ಮರಳಿದರು. ಕೆಲ ಶಾಲೆಗಳವರು ಪೊಲೀಸ್‌ ನೆರವು ಪಡೆದು ಪರೀಕ್ಷೆ, ಶಾಲಾ ವಾರ್ಷಿಕೋತ್ಸವಗಳನ್ನು ಮಾಡಿದರು. ಕೆಲ ಶಾಲೆ ಕಚೇರಿಗಳಿಗೆ ನುಗ್ಗಿ ಬಾಗಿಲು ಮುಚ್ಚುವಂತೆ ತಾಕೀತು ಮಾಡಿದ ಕಾರ್ಯಕರ್ತರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾ ಮಲೈ ಅವರು ಹಿಡಿದು ತಂದರು.

ADVERTISEMENT

ಬೆಳಿಗ್ಗೆ 6.30ರಿಂದಲೇ ಕಾರ್ಯಕರ್ತರು ಸಂಘಟನೆಗಳ ಬಾವುಟಗಳನ್ನು ಹಿಡಿದು ಬೈಕುಗಳಲ್ಲಿ ನಗರದೊಳಗೆ ಬೈಕ್‌ಗಳಲ್ಲಿ ಪ್ರದಕ್ಷಿಣೆ ಹಾಕಿದರು. ನಗರದ ವಿವಿಧೆ ರಸ್ತೆಗಳಲ್ಲಿ ಸಂಚರಿಸಿ, ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ತಾಕೀತು ಮಾಡಿದರು. ಅಂಗಡಿಗಳನ್ನು ಮುಚ್ಚುವಂತೆ ಎಂದು ಧ್ವನಿವರ್ಧಕದಲ್ಲಿ ಘೋಷಣೆ ಕೂಗಿದರು. ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಘೋಷಣೆ ಕೂಗಿದರು. ಬಹುತೇಕ ಹೋಟೆಲ್‌ಗಳು, ಕಾಫಿ–ಚಹಾ ಅಂಗಡಿಗಳು ಮುಚ್ಚಿದ್ದವು. ಇದರಿಂದ ಪ್ರವಾಸಿಗರು, ಸಾರ್ವಜನಿಕರು ತೊಂದರೆ ಅನುಭವಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿಮುಂಗಟ್ಟುಗಳು ಮುಚ್ಚಿದ್ದರಿಂದ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಲಿಲ್ಲ. ಎಂ.ಜಿ ರಸ್ತೆ, ಮಾರುಕಟ್ಟೆ ರಸ್ತೆಗಳಲ್ಲಿ ವಹಿವಾಟು ಇಲ್ಲದಿದ್ದರಿಂದ ಜನ, ವಾಹನ ಸಂಚಾರವು ಕಡಿಮೆ ಇತ್ತು.

ಲಘು ಲಾಠಿ ಪ್ರಹಾರ: ಬಂದ್‌ ನಿಮಿತ್ತ ಶಾಲೆ– ಕಾಲೇಜು ಮುಚ್ಚಿಸುವುದರಲ್ಲಿ ತೊಡಗಿದ್ದ ಕನ್ನಡ ಸಂಘಟನೆ ಮುಖಂಡರನ್ನು ಬಂಧಿಸಿದ್ದನ್ನು ವಿರೋಧಿಸಿ ಕಾರ್ಯಕರ್ತರು ನಗರ ಪೊಲೀಸ್‌ ಠಾಣೆ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಟಾಪಟಿ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕೆಲವರಿಗೆ ಲಾಠಿ ಏಟು ಬಿದ್ದು ಪೆಟ್ಟಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ನೂರುಲ್ಲಾ ಖಾನ್‌, ದಲಿತ ಸಂಘಟನೆ ಮುಖಂಡ ದಂಟರಮಕ್ಕಿ ಶ್ರೀನಿವಾಸ್‌, ಅಂಗಡಿ ಚಂದ್ರು, ಅನ್ವರ್‌ ಮೊದಲಾದ ಮುಖಂಡರನ್ನು ಪೊಲೀಸರು ಬಂಧಿಸಿದರು.

‘ಅಂಗಡಿ ವ್ಯಾಪಾರವೇ ನಮ್ಮ ಬದುಕಿಗೆ ಆಧಾರ. ಬಂದ್‌, ಯಾತ್ರೆ, ಮೆರವಣಿಗೆ ಎಂದು ಅಂಗಡಿ ಮುಚ್ಚಿಸಿದರೆ ಆ ದಿನದ ನಷ್ಟ ತುಂಬಿಕೊಡುವವರು ಯಾರು. ಅನ್ಯಾಯವಾಗಿದ್ದರೆ ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಅಂಗಡಿಗಳನ್ನು ಮುಚ್ಚಿಸಬಾರದು’ ಎಂದು ಪಾತ್ರೆ ಅಂಗಡಿಯ ಆದಿನಾಥ್‌ ಜೈನ್‌ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ಕೆಲ ಅಂಗಡಿಗಳು ಅರ್ಧ ಬಾಗಿಲು ತೆರೆದುಕೊಂಡು ವ್ಯಾಪಾರ ಮಾಡಿದರು. ಔಷಧ ಅಂಗಡಿಗಳು, ಆಸ್ಪತ್ರೆಗಳು ತೆರೆದಿದ್ದವು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ಸು, ಆಟೊ, ವಾಹನಗಳು ಮಾಮೂಲಿಯಂತೆ ಸಂಚರಿಸಿದವು. ರಸ್ತೆ ಬದಿ, ತಳ್ಳುಗಾಡಿಗಳಲ್ಲಿ ಹಣ್ಣು, ಹೂವು, ತರಕಾರಿ–ಸೊಪ್ಪು ವ್ಯಾಪಾರ ಎಂದಿನಂತೆ ನಡೆಯಿತು. ಸಂಜೆಯ ಹೊತ್ತಿಗೆ ಅಂಗಡಿ ಮುಂಗಟ್ಟುಗಳು ತೆರೆದವು. ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.