ADVERTISEMENT

ಚುನಾವಣಾ ಬಂದೋಬಸ್ತ್‌ಗೆ 3400 ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:00 IST
Last Updated 5 ಏಪ್ರಿಲ್ 2013, 9:00 IST

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆಯನ್ನು  ಶಾಂತಿಯುತವಾಗಿ ನಡೆಸಲು ಕೇಂದ್ರೀಯ ಅರೆಸೇನಾ ಪಡೆಯ 13 ತುಕಡಿಗಳು ಸೇರಿದಂತೆ ಬಂದೋ   ಬಸ್ತ್‌ಗೆ 3400 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಒಂದು ಕೇಂದ್ರೀಯ ಅರೆಸೇನಾ ಪಡೆ ತುಕಡಿ ಆಗಮಿಸಿದ್ದು, ಶೃಂಗೇರಿ ಕ್ಷೇತ್ರಕ್ಕೆ ನಿಯೋಜಿಸಲಾಗಿದೆ. ಉಳಿದ 12 ತುಕಡಿಗಳು ಇದೇ 18ರಂದು ಆಗಮಿಸಲಿದ್ದು, ಚಿಕ್ಕಮಗಳೂರು ಕ್ಷೇತ್ರಕ್ಕೆ 3, ಮೂಡಿಗೆರೆ, ಕಡೂರು, ತರೀಕೆರೆಗೆ ತಲಾ 2 ಹಾಗೂ ಶೃಂಗೇರಿಗೆ ಇನ್ನು 3 ತುಕಡಿಗಳನ್ನು ನಿಯೋಜಿಸಲಾಗುವುದು. ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳಲ್ಲಿ ಕಡೂರು-ತರೀಕೆರೆಗೆ ಒಂದು ಕೆಎಸ್‌ಆರ್‌ಪಿ ತುಕಡಿ, ಉಳಿದಂತೆ ಎಲ್ಲ ಕ್ಷೇತ್ರಗಳಿಗೂ ತಲಾ ಒಂದೊಂದು ತುಕಡಿ ನಿಯೋ ಜಿಸಲಾಗುವುದು ಎಂದರು.

ಪೊಲೀಸ್ ವರಿಷ್ಠಾಧಿಕಾರಿ 1, ಹೆಚ್ಚುವರಿ ಪೊಲೀಸ್ ವರಿ ಷ್ಠಾಧಿಕಾರಿ -1, ಡಿವೈಎಸ್‌ಪಿ-3, ಸಿಪಿಐ-16, ಪಿಎಸ್‌ಐ- 40, ಎಎಸ್‌ಐ-90, ಜಿಲ್ಲಾ ಶಸಸ್ತ್ರ ಪಡೆ-300, ಗೃಹ ರಕ್ಷಕ ದಳ-500 ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಿಂದ 1250 ಸಿಬ್ಬಂದಿ, ಕೇಂದ್ರೀಯ ಅರೆಸೇನಾ ಪಡೆಯ 1300 ಮಂದಿ, 120 ಕೆಎಸ್‌ಆರ್‌ಪಿ ಚುನಾವಣಾ ಬಂದೋಬಸ್ತ್ ನೋಡಿ ಕೊಳ್ಳಲಿವೆ. ಐದೂ ಕ್ಷೇತ್ರಗಳಿಗೆ ಡಿವೈಎಸ್‌ಪಿ ಮತ್ತು ಸಿಪಿಐ ರ‌್ಯಾಂಕ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಹೇಳಿದರು.

2008ರ ವಿಧಾನ ಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ಬುಕಡಿಬೈಲಿಗೆ ಭೇಟಿ ನೀಡಿದ್ದ ಶಸ್ತ್ರಸಜ್ಜಿತ ನಕ್ಸಲರು ಮತದಾನ ಮಾಡದಂತೆ ಬೆದರಿಕೆ ಹಾಕಿದ್ದರು. ಇದೊಂದು ಘಟನೆ ಹೊರತುಪಡಿಸಿ, ಹಿಂದಿನ ಯಾವುದೇ ಚುನಾವಣೆಗಳಲ್ಲಿ ನಕ್ಸಲರು ಜಿಲ್ಲೆಯಲ್ಲಿ ಚುನಾವಣೆಗೆ ಅಡ್ಡಿಪಡಿಸಿಲ್ಲ. ಈ ಬಾರಿಯೂ ಅಂತಹ ಯಾವುದೇ ಪ್ರಯತ್ನಗಳು ನಡೆಯುವ ಸಾಧ್ಯತೆಗಳಿಲ್ಲ. ಕಳೆದ ಮೂರ‌್ನಾಲ್ಕು ತಿಂಗಳಿಂದ ನಕ್ಸಲರ ಚಲನವಲನ ಜಿಲ್ಲೆಯಲ್ಲಿ ಕಡಿಮೆಯಾಗಿದೆ ಎಂದು ಹೇಳಿದರು.

ಶೃಂಗೇರಿ -249, ಮೂಡಿಗೆರೆ -224, ಚಿಕ್ಕಮ ಗಳೂರು-237, ತರೀಕೆರೆ -219, ಕಡೂರು-236 ಬೂತ್ ಸೇರಿದಂತೆ 1165 ಬೂತ್‌ಗಳನ್ನು ಜಿಲ್ಲೆಯಾದ್ಯಂತ ಸಜ್ಜುಗೊ ಳಿಸಲಾಗಿದೆ. ಇದರಲ್ಲಿ 113 ಅತೀ ಸೂಕ್ಷ್ಮ, 226 ಸೂಕ್ಷ್ಮ ಹಾಗೂ 790 ಸಾಮಾನ್ಯ ಮತಗಟ್ಟೆಗಳಾಗಿವೆ. ಶೃಂಗೇರಿಯಲ್ಲಿ 30 ಮತ್ತು ಮೂಡಿಗೆರೆ ಕ್ಷೇತ್ರದಲ್ಲಿ 6 ಬೂತ್‌ಗಳು ಸೇರಿ ಒಟ್ಟು 36 ನಕ್ಸಲ್ ಬಾಧಿತ ಬೂತ್‌ಗಳೆಂದು ಗುರುತಿಸಲಾಗಿದೆ. ನಕ್ಸಲ್ ಬಾಧಿತ ಪ್ರದೇಶಗಳ ಬೂತ್ ಮತ್ತು ಅತಿ ಸೂಕ್ಷ್ಮ ಬೂತ್‌ಗಳಿಗೆ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ನಿಯೋಜಿ ಸಲಾಗುವುದು ಎಂದರು. ಜಿಲ್ಲೆಯಲ್ಲಿ 21 ಚೆಕ್‌ಪೋಸ್ಟ್ ತೆರೆಯಲಾಗಿದೆ.

ಅಕ್ರಮ ಮದ್ಯ ಸಾಗಣೆಯ 7 ಪ್ರಕರಣಗಳು ದಾಖಲಾಗಿದ್ದು, ಸುಮಾರು 20 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಮೂರು ಪ್ರಕರಣಗಳು ದಾಖಲಾಗಿವೆ. ಭದ್ರತೆಗೆ ಸಂಬಂಧಿಸಿದಂತೆ 268 ಪ್ರಕರಣಗಳು ದಾಖಲಾಗಿದ್ದು, ಸಂಬಂಧಿಸಿದವರಿಗೆ ತಾಲ್ಲೂಕು ದಂಡಾಧಿಕಾರಿ ಎದುರು ಹಾಜರಾಗಲು ನೋಟಿಸ್ ನೀಡಲಾಗಿದೆ. ರೌಡಿಗಳು, ಮತೀಯ ಗೂಂಡಾಗಳ ಮೇಲೂ ನಿಗಾ ಇಡಲಾಗಿದೆ. ಚುನಾವಣಾ ಪ್ರಕ್ರಿಯೆಗೆ ತೊಂದರೆಯಾಗುವ ಸಾಧ್ಯತೆ ಕಂಡುಬಂದರೆ ತಕ್ಷಣವೇ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ 9560 ಬಂದೂಕು ಪರವಾನಗಿ ಇದ್ದು, 614 ಬಂದೂಕುಗಳನ್ನು ಈಗಾಗಲೇ ಠೇವಣಿ ಇರಿಸಿಕೊಳ್ಳಲಾಗಿದೆ. ಆದಷ್ಟು ಶೀಘ್ರ ಬಂದೂಕುಗಳನ್ನು ಠೇವಣಿ ಇರಿಸಿಕೊಳ್ಳಲಾಗುವುದು. ಈ ಬಾರಿಯ ಚುನಾವಣೆ ಭದ್ರತೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಮತಗಟ್ಟೆಗಳಿಗೆ ಬರಬೇಕು. ಚುನಾವಣಾ ಅಕ್ರಮದ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ ಅಥವಾ ತಮಗೆ ದೂರು ನೀಡಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT