ADVERTISEMENT

ಜನವಾಹಿನಿ ಯಾತ್ರೆಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಚಿಕ್ಕಮಗಳೂರು: ಜೆಡಿಎಸ್ ಜನವಾಹಿನಿ ಯಾತ್ರೆ ಸೋಮವಾರ ನಗರಕ್ಕೆ ಆಗಮಿಸಿದ್ದು, ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಗರದ ಎಂ.ಜಿ.ರಸ್ತೆಯಲ್ಲಿ ಬೆಂಬಲಿಗರೊಂದಿಗೆ `ರೋಡ್‌ಶೋ~ ನಡೆಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಸಮಾವೇಶಕ್ಕೂ ಮುನ್ನ ಮೆರವಣಿಗೆ ಮತ್ತು ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡರು.

ನಂತರ ಸಭೆಯಲ್ಲಿ ಮಾತನಾಡಿದ ಅವರು, ಜನವಾಹಿನಿ ಯಾತ್ರೆಗೆ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಪಕ್ಷದ ಸಾಮರ್ಥ್ಯ ಹೆಚ್ಚುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಿ ಹೆಚ್ಚು ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ಮುಖಂಡ ಬಸವರಾಜ ಪಾಟೀಲ ಯತ್ನಾಳ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ವೈ.ಎಸ್.ವಿ.ದತ್ತ, ಪಕ್ಷದ ರಾಜ್ಯ ಯುವ ಘಟಕ ಅಧ್ಯಕ್ಷ ಮಧುಬಂಗಾರಪ್ಪ, ಅಬ್ದುಲ್ ಅಜೀಂ, ಡಾ. ಕೆ.ಅನ್ನದಾನಿ, ಶಕೀಲ್ ನವಾಜ್, ರಾಜ್ಯ ಉಪಾಧ್ಯಕ್ಷ ಎಚ್.ಡಿ.ರಾಜೇಂದ್ರ, ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಚ್.ದೇವರಾಜ್, ಮುಖಂಡರಾದ ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ, ಹಂಪಯ್ಯ, ಹೊಲದಗದ್ದೆ ಗಿರೀಶ್, ಉಮಾಪತಿ, ಬಾಲಕೃಷ್ಣೇಗೌಡ ಮತ್ತಿತರರಿದ್ದರು.

ಇದಕ್ಕೂ ಮುನ್ನ ಪಕ್ಷದ ಕಚೇರಿ ಆವರಣದಿಂದ ಹೊರಟ ಮೆರವಣಿಗೆ ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ.ರಸ್ತೆಯಲ್ಲಿ ಸಾಗಿತು. ಪಕ್ಷದ ಬಾವುಟ ಹಿಡಿದ ನೂರಾರು ಕಾರ್ಯಕರ್ತರು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಘೋಷಣೆ ಕೂಗಿದರು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯುವಕರ ಗುಂಪು ವಾದ್ಯದ ನಿನಾದಕ್ಕೆ ಕುಣಿಯುತ್ತಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.