ADVERTISEMENT

ಜಾತ್ಯತೀತ ಶಕ್ತಿಗಳ ಕ್ರೋಡೀಕರಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 7:25 IST
Last Updated 24 ಫೆಬ್ರುವರಿ 2018, 7:25 IST

ಮೂಡಿಗೆರೆ: ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ಶಕ್ತಿಗಳ ಕ್ರೋಡೀಕರ ಣವಾಗಲಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌. ಮಹೇಶ್‌ ತಿಳಿಸಿದರು. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶುಕ್ರವಾರ ಜೆಡಿಎಸ್‌ ಹಾಗೂ ಬಹುಜನ ಸಮಾಜ ಪಕ್ಷದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಿಕಾಸಪರ್ವ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಎಸ್‌ಪಿ ಮಾಯಾವತಿ ಹಾಗೂ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಸಮ್ಮುಖದಲ್ಲಿ ರಾಜ್ಯದಲ್ಲಿ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದು, ಈ ಹೊಂದಾಣಿಕೆಯು ಕೇವಲ ರಾಜ್ಯಕ್ಕೆ ಸೀಮಿತವಾಗದೇ, ರಾಷ್ಟ್ರ ರಾಜಕಾರ ಣದಲ್ಲಿ ಜಾತ್ಯತೀತ ಶಕ್ತಿಗಳು ಕ್ರೋಢೀ ಕರಣವಾಗುವ ಮೂಲಕ ಬಹುಕಾಲ ಹೊಂದಾಣಿಕೆ ಸಾಗಲಿದೆ ಎಂದರು.

‘ಎಚ್‌.ಡಿ. ಕುಮಾರಸ್ವಾಮಿಯು ಜನಸ್ನೇಹಿಯಾಗಿದ್ದು, ಎಂದಿಗೂ ತಾವೊಬ್ಬ ಮಾಜಿ ಮುಖ್ಯಮಂತ್ರಿ ಎಂದು ಜನರಿಂದ ದೂರ ಉಳಿಯುವ ಕೆಲಸ ಮಾಡಲಿಲ್ಲ. ಇಂತಹ ವ್ಯಕ್ತಿಗಳಿಂದ ಮಾತ್ರ ಜನಪ್ರಿಯ ಯೋಜನೆಗಳು ಬರಲು ಸಾಧ್ಯ. ರಾಜ್ಯದಲ್ಲಿ ನಡೆದಿರುವ ಹೊಂದಾಣಿಕೆಯಂತೆ 20 ಕ್ಷೇತ್ರಗಳಲ್ಲಿ ಬಿಎಸ್‌ಪಿ ಕಣಕ್ಕಿಳಿಯಲಿದ್ದು, ಉಳಿದ 204 ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಲಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಬಿಎಸ್‌ಪಿಯು ಜೆಡಿಎಸ್‌ ಪಕ್ಷವನ್ನು ಬೆಂಬಲಿಸುತ್ತದೆ’ ಎಂದರು.

ADVERTISEMENT

ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ‘ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ₹ 750 ಕೋಟಿ ಅನುದಾನವನ್ನು ತಂದಿದ್ದು, ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಆದರೆ, ವಿರೋಧ ಪಕ್ಷದಲ್ಲಿ ಕುಳಿತ್ತಿದ್ದರಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಮಲೆನಾಡು ಅನೇಕ ಜ್ವಲಂತ ಸಮಸ್ಯೆಗಳ ಸುಳಿಯಾಗಿದ್ದು, ಕ್ಷೇತ್ರದಲ್ಲಿ ನಿವೇಶನ ರಹಿತರ ಸಮಸ್ಯೆ ಕೂಲಿಕಾರ್ಮಿಕರನ್ನು ಕಾಡುತ್ತಿದೆ.

ಜಂಟಿ ಸರ್ವೇ ನಡೆಸುವ ಮೂಲಕ ಕಂದಾಯಭೂಮಿ ಹಾಗೂ ಅರಣ್ಯಭೂಮಿಯನ್ನು ಗುರುತಿಸಿ ರೈತರ ಸಮಸ್ಯೆಗೆ ಪರಿಹಾರ ರೂಪಿಸಬೇಕು, ನಮೂನೆ 53 ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು, ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಬೇಕು’ ಎಂದರು.

ರಾಜ್ಯ ಸರ್ಕಾರವು ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ತಾರತಮ್ಯ ನಡೆಸಿದ್ದು, ತಾಲ್ಲೂಕಿನಿಂದ ದೂರದಲ್ಲಿರುವ ಕಳಸವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು ಎಂದರು.

ಪಕ್ಷದ ರಾಜ್ಯ ಪದಾಧಿಕಾರಿ ಎಚ್‌.ಎಚ್‌. ದೇವರಾಜ್‌ ಮಾತನಾಡಿ, ‘ಜಿಲ್ಲೆಯು ಸಮಸ್ಯೆಗಳ ಆಗಾರವಾಗಿದ್ದು, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಜನ ಸಾಮಾನ್ಯರ ಪರವಾದ ಸರ್ಕಾರ ಆಡಳಿತಕ್ಕೆ ಬರಬೇಕು. ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಬೆಳೆಗಾರರ ಸಾಲ ಮನ್ನಾವಾಗಬೇಕು’ ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌, ತಾಲ್ಲೂಕು ಅಧ್ಯಕ್ಷ ಸುರೇಶ್‌ಗೌಡ, ಪದಾಧಿಕಾರಿಗಳಾದ ಎಸ್‌.ಎಲ್‌. ಬೋಜೇಗೌಡ, ಎಸ್‌.ಎಲ್‌. ಧರ್ಮೇಗೌಡ, ಎಚ್‌.ಎಚ್‌. ದೇವರಾಜ್‌, ಬಾಲಕೃಷ್ಣೇಗೌಡ, ಮರಿಯಾಫೇರಿಸ್‌, ಎಂ.ವಿ. ಜಗದೀಶ್‌, ಬಿ.ಎಂ. ಭೈರೇಗೌಡ, ಪದ್ಮ ತಿಮ್ಮೇಗೌಡ, ನಿಖಿಲ್‌ ಚಕ್ರವರ್ತಿ, ಲಕ್ಷ್ಮಣಗೌಡ, ಜ್ಯೋತಿಈಶ್ವರ್‌, ಮಹೇಶ್‌, ಮಂಜಪ್ಪಯ್ಯ, ಜ್ವಾಲಣ್ಣಯ್ಯ, ಜಕಾರಿಯಾ ಜಾಕೀರ್‌, ಲೋಹಿತ್‌, ಜ್ಯೋತಿವಿಠಲ್‌, ಶಬ್ಬೀರ್‌, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಕೃಷ್ಣ, ಝಾಕೀರ್‌ ಹುಸೇನ್‌, ಪಿ.ಕೆ. ಮಂಜುನಾಥ್‌, ಯು.ಬಿ. ಮಂಜಯ್ಯ, ಚಂದ್ರಶೇಖರ್‌, ಲೋಕವಳ್ಳಿ ರಮೇಶ್‌ ಇದ್ದರು.

ಅಭಿಮಾನದ ಚಪ್ಪಾಳೆ

ಎಚ್‌.ಡಿ. ಕುಮಾರಸ್ವಾಮಿ ವೇದಿಕೆ ಬರುತ್ತಿದ್ದಂತೆ ರಾಜ್‌ಕುಮಾರ್‌ ಗಾಯನದ ‘ನಾನು ನಿಮ್ಮವನು... ನಿಮ್ಮ ಮನೆಯವನು... ಚಿಂತೆಯ ಮರೆಸುವನು...’ ಎಂಬ ಗೀತೆಯೊಂದಿಗೆ ಹಿಂದಿನ ಜೆಡಿಎಸ್‌ ಸರ್ಕಾರದ ಸಾಧನೆಯ ದೃಶ್ಯ ಬರುತ್ತಿದ್ದಂತೆ ಕಾರ್ಯಕರ್ತರು ಮುಗಿಲು ಮುಟ್ಟುವಂತೆ ಚಪ್ಪಾಳೆ ತಟ್ಟಿದರು.

ಅಯೂಬ್‌ ಜೆಡಿಎಸ್‌ ಸೇರ್ಪಡೆ

ವಿಕಾಸ ಪರ್ವ ಯಾತ್ರೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡ ಚಕಮಕ್ಕಿಯ ಎ.ಸಿ. ಅಯೂಬ್‌ ಅವರು ತಮ್ಮ ಬೆಂಬಲಿಗರೊಂದಿಗೆ ಎಚ್‌.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡರು. ಬಳಿಕ ಮಾತನಾಡಿದ ಅವರು, ‘40 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ದುಡಿದಿದ್ದು, ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಆದರೆ, ಜೆಡಿಎಸ್‌ನ ರಂಜನ್ ಅಜಿತ್‌ಕುಮಾರ್‌ ಹಾಗೂ ಶಾಸಕ ಬಿ.ಬಿ. ನಿಂಗಯ್ಯ ಅವರು ತಮ್ಮ ಪಕ್ಷದ ಅಭ್ಯರ್ಥಿಯ ರಾಜೀನಾಮೆ ಕೊಡಿಸಿ, ಅಲ್ಪಸಂಖ್ಯಾತ ಮಹಿಳೆಗೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ನೀಡಿದರು’ ಎಂದು ಕಳೆದ ಅವಧಿಯಲ್ಲಿ ತಮ್ಮ ಪತ್ನಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.