ADVERTISEMENT

ಜಿಲ್ಲಾಧಿಕಾರಿ ವಿರುದ್ಧ ಘೋಷಣೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 9:42 IST
Last Updated 8 ಜುಲೈ 2017, 9:42 IST
ಮೂಡಿಗೆರೆ ಪಟ್ಟಣದ ಜೇಸಿಐ ಭವನದ ಮುಂಭಾಗದಲ್ಲಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯರ್ತರು ಅಂಬೇಡ್ಕರ್‌ ಸಮುದಾಯ ಭವನಕ್ಕೆ ಭೂಮಿ ಹಸ್ತಾಂತರಿಸಿಲ್ಲ ಎಂದು ಆರೋಪಿಸಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ದಲಿತ ಮುಖಂಡ ಯು.ಬಿ. ಮಂಜಯ್ಯ ಮಾತನಾಡಿದರು.
ಮೂಡಿಗೆರೆ ಪಟ್ಟಣದ ಜೇಸಿಐ ಭವನದ ಮುಂಭಾಗದಲ್ಲಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯರ್ತರು ಅಂಬೇಡ್ಕರ್‌ ಸಮುದಾಯ ಭವನಕ್ಕೆ ಭೂಮಿ ಹಸ್ತಾಂತರಿಸಿಲ್ಲ ಎಂದು ಆರೋಪಿಸಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ದಲಿತ ಮುಖಂಡ ಯು.ಬಿ. ಮಂಜಯ್ಯ ಮಾತನಾಡಿದರು.   

ಮೂಡಿಗೆರೆ: ಡಾ. ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನಕ್ಕೆ ಮಂಜೂರಾಗಿರುವ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಶುಕ್ರವಾರ ವಿವಿಧ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಜೇಸಿಐ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಹ್ಯಾಂಡ್‌ಪೋಸ್ಟಿನ ಕೃಷಿ ಹಾಗೂ ತೋಟಗಾರಿಕಾ ಮಹಾವಿದ್ಯಾಲಯದ ಬಳಿ ಡಾ. ಬಿ.ಆರ್‌. ಅಂಬೇಡ್ಕರ್‌ ಭವನಕ್ಕೆ ಗುರುತಿಸಿರುವ ಜಾಗದ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿ ಭಟನಾಕಾರರು, ಅಲ್ಲಿಂದ ಸುಮಾರು ಮೂರು ಕಿ.ಮೀ. ದೂರದ ತಾಲ್ಲೂಕು ಕಚೇರಿಯವರೆಗೂ ಜಿಲ್ಲಾಧಿಕಾರಿಯ ವಿರುದ್ಧ ಘೋಷಣೆಯನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಳಿಕ ತಾಲ್ಲೂಕು ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ, ತಾಲ್ಲೂಕು ಕಚೇರಿ ಆವರಣದ ಮುಂಭಾ ಗದಲ್ಲಿರುವ ಜೇಸಿಐ ಭವನದ ಬಳಿ ಹಾಕಲಾಗಿದ್ದ ಟೆಂಟ್‌ನಲ್ಲಿ ಸಮಾವೇಶ ಗೊಂಡು, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ, ಮಂಜೂರಾಗಿರುವ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತ ರಿಸುವವರೆಗೂ ಸ್ಥಳದಲ್ಲೇ ದರಣಿ ನಡೆಸು ತ್ತೇವೆ ಎಂಬ ನಿರ್ಧಾರ ಕೈಗೊಂಡರು.

ADVERTISEMENT

ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮುಖಂಡರು, ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖಂಡರ ಸಭೆ ಕರೆದಿದ್ದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಪ್ರಕಟಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ದಲಿತ ಮುಖಂಡ ಯು.ಬಿ. ಮಂಜಯ್ಯ ಮಾತನಾಡಿ, 2012 ರಲ್ಲಿ ಅಂಬೇಡ್ಕರ್‌ ಸಮುದಾಯ ಭವನ ನಿರ್ಮಾಣಕ್ಕೆ ₹ 1 ಕೋಟಿ ಹಣ ಮಂಜೂರಾಗಿದ್ದು, 2015 ರಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಷಡ ಕ್ಷರಸ್ವಾಮಿ ಅವರು ಹಳೇಮೂಡಿಗೆರೆ ಗ್ರಾಮದ ಸರ್ವೆ ನಂ 200 ರಲ್ಲಿ 5 ಎಕರೆ ಭೂಮಿ ಮಂಜೂರು ಮಾಡಿ, ಸಮಾಜ ಕಲ್ಯಾಣ ಇಲಾಖೆಗೆ ವರ್ಗಾಯಿಸಲು ಆದೇಶಿಸಿದ್ದರು. ಆದರೆ ಈಗಿನ ಜಿಲ್ಲಾಧಿ ಕಾರಿಗಳು ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿ ಸದೇ ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ ಎಂದರು.

ದಲಿತ ಮುಖಂಡ ಲೋಕವಳ್ಳಿ ರಮೇಶ್‌ ಮಾತನಾಡಿ, ಜಿಲ್ಲಾಧಿಕಾರಿಗಳು ಮಾಧ್ಯಮದವರ ಮುಂದೆ ಮಾತ್ರ ತಾವು ಬಡವರ, ದೀನದಲಿತರ ಪರವೆಂದು ಬಿಂಬಿಸಿಕೊಳ್ಳುತ್ತಾರೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್‌. ಅನಂತ್‌ ಮಾತನಾಡಿ, ತಾಲ್ಲೂಕಿನಲ್ಲಿ ಅನುದಾನವಿದ್ದರೂ ಭೂಮಿಯಿಲ್ಲದೇ ಅಂಬೇಡ್ಕರ್‌ ಸಮು ದಾಯ ಭವನ ನಿರ್ಮಿಸದಂತಾಗಿದೆ ಎಂದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡ ರಾದ ಕಿರುಗುಂದ ರಾಮಯ್ಯ, ವಸತಿ ಗಾಗಿ ಹೋರಾಟ ಸಮಿತಿ ಅಧ್ಯಕ್ಷ ಬಿ. ರುದ್ರಯ್ಯ, ಛಲವಾದಿ ಮಹಾಸಭಾದ ಅಧ್ಯಕ್ಷ ರುದ್ರಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ನಿಖಿಲ್‌ ಚಕ್ರವರ್ತಿ, ಬೆಟ್ಟಗೆರೆ ಶಂಕರ್‌, ಚಂದ್ರಶೇಖರ್, ಹೆಸ್ಗಲ್‌ ಗಿರೀಶ್‌, ದೀಪಕ್‌ದೊಡ್ಡಯ್ಯ, ಎಂ.ಎಸ್‌. ಕೃಷ್ಣ, ಬಕ್ಕಿಮಂಜು ಇದ್ದರು.

* * 

‘ಜಿಲ್ಲಾಧಿಕಾರಿಯು ಪತ್ರಿಕೆಗಳ ಹುಲಿಯಾಗಿದ್ದು, ದಲಿತರ, ಬಡವರ ವಿರೋಧಿಯಾಗಿದ್ದಾರೆ’
ಲೋಕವಳ್ಳಿ ರಮೇಶ್‌
ದಲಿತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.