ADVERTISEMENT

ಜಿಲ್ಲೆಯಾದ್ಯಂತ ಕಾವೇರಿದ ಹೋರಾಟ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 7:40 IST
Last Updated 1 ಅಕ್ಟೋಬರ್ 2012, 7:40 IST
ಜಿಲ್ಲೆಯಾದ್ಯಂತ ಕಾವೇರಿದ ಹೋರಾಟ
ಜಿಲ್ಲೆಯಾದ್ಯಂತ ಕಾವೇರಿದ ಹೋರಾಟ   

ಚಿಕ್ಕಮಗಳೂರು: ತಮಿಳುನಾಡಿಗೆ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರವೂ ಪ್ರತಿಭಟನೆ ಮುಂದುವರಿದಿದೆ.

ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ
ಚಿಕ್ಕಮಗಳೂರು: ಆಲ್ದೂರಿನಲ್ಲಿ ಬಜರಂಗ ದಳ ಕಾರ್ಯ ಕರ್ತರ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಖಂಡಿಸಿ ಬಜರಂಗದಳ ಕಾರ್ಯಕರ್ತರು ಭಾನುವಾರ ನಗರದ ಗಾಂಧಿ ಪ್ರತಿಮೆಮುಂದೆ ಪ್ರತಿಭಟನೆ ನಡೆಸಿದರು.
ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ, ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ಆಲ್ದೂರು ಪಟ್ಟಣದ ಬಸ್‌ನಿಲ್ದಾಣದ ಸಮೀಪ ಸಾರ್ವಜನಿಕರು ತಡೆದು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ವಾಹನವನ್ನು ಜಖಂಗೊಳಿಸಿದ್ದಾರೆ. ಆಗ ಕ್ರಮ ತೆಗೆದುಕೊಳ್ಳದೆ ಸುಮ್ಮನಿದ್ದ ಪೊಲೀಸರು ಅದೇ ದಿನ ಮಧ್ಯ ರಾತ್ರಿ ವಿನಾಕಾರಣ ಬಜರಂಗದಳ ಕಾರ್ಯಕರ್ತರ ಮನೆ ಮೇಲೆ ಆಲ್ದೂರು ಠಾಣೆ ಪೊಲೀಸರು ಮತ್ತು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕರು ದಾಳಿ ನಡೆಸಿ, ಏಳು ಮಂದಿ ಕಾರ್ಯಕರ್ತರನ್ನು ಬಂಧಿಸಿ, ಠಾಣೆಯಲ್ಲಿ ಮನಸೋಇಚ್ಛೆ ಥಳಿಸಿದ್ದಾರೆ ಎಂದು ಪ್ರತಿಭಟ ನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಮಾನವೀಯವಾಗಿ ನಡೆಸಿಕೊಂಡಿದ್ದಲ್ಲದೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕರು, ಆಲ್ದೂರು ಠಾಣೆ ಪಿಎಸ್‌ಐ ಹಾಗೂ ಠಾಣೆಯ ಕಾನ್ಸ್‌ಟೆಬಲ್‌ಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಮುಖಂಡರಾದ ಕೋಟೆ ರಾಜು, ಯೋಗೀಶ್ ಅರಸ್, ರಾಜು, ಪ್ರೇಂಕಿರಣ್, ಶಾಂತಿ, ದೀಪಕ್, ಆಲ್ದೂರು ಮಂಜು, ಮಧು, ರಾಕೇಶ್, ಸುದರ್ಶನ್ ಇನ್ನಿತರರು ನೇತೃತ್ವ ವಹಿಸಿದ್ದರು.

ಕಡೂರು: ಕರವೇ ಪ್ರತಿಭಟನೆ

ಕಡೂರು:ಕಾವೇರಿ ನದಿ ನೀರು ಬಿಡಲು ಪ್ರಧಾನಿ ಮಾಡಿರುವ ಆದೇಶ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಕಾರರು ಶನಿವಾರ ಮರವಂಜಿ ವೃತ್ತದಲ್ಲಿ ಕೆಲವು ಕಾಲ ಮಾನವ ಸರಪಳಿ ರಚಿಸಿ ಪ್ರಧಾನಿಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. 

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಕಾವೇರಿ ನೀರು ಹಂಚಿಕೆಯಲ್ಲಿ ಏಕ ಪಕ್ಷೀಯವಾಗಿ ಪ್ರಧಾನಿ ತಮಿಳುನಾಡಿಗೆ ನೀರು ಬಿಡಲು ಆದೇಶಿಸಿರುವುದನ್ನು ಖಂಡಿಸಿ ಕೆಲವು ನಿಮಿಷಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಸಿಆರ್‌ಎ ಆದೇಶವನ್ನು ಪುನರ್ ಪರಿಶೀಲಿಸುವಂತೆ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೀರು ಬಿಡಲು ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದರು. ಜಿಲ್ಲಾ ಅಧ್ಯಕ್ಷ ರುದ್ರೇಗೌಡ, ಆಟೊ ಅಣ್ಣಪ್ಪ, ತರೀಕೆರೆ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ನವೀನ್, ಮಂಜು, ಹರೀಶ್, ಮೋಹನ್, ಸಂಜಯ್ ಹಾಗೂ ನೂರಾರು ಕಾರ್ಯಕರ್ತರು ಇದ್ದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.