ADVERTISEMENT

ಜೀವಜಲ ರಕ್ಷಿಸದಿದ್ದರೆ ಅಪಾಯ: ಸ್ವಾಮೀಜಿ

ಕಡೂರು: 29 ಕೆರೆಗಳನ್ನು ತುಂಬಿಸುವ ಪ್ರಥಮ ಹಂತದ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 6:48 IST
Last Updated 16 ಮಾರ್ಚ್ 2018, 6:48 IST
ಕಡೂರು ತಾಲ್ಲೂಕಿನ ಬಿಳುವಾಲದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಪ್ರಥಮ ಹಂತದ ಕಾಮಗಾರಿಗೆ ಪಂಡಿತಾರಾಧ್ಯ ಸ್ವಾಮೀಜಿ ಚಾಲನೆ ನೀಡಿದರು.
ಕಡೂರು ತಾಲ್ಲೂಕಿನ ಬಿಳುವಾಲದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಪ್ರಥಮ ಹಂತದ ಕಾಮಗಾರಿಗೆ ಪಂಡಿತಾರಾಧ್ಯ ಸ್ವಾಮೀಜಿ ಚಾಲನೆ ನೀಡಿದರು.   

ಕಡೂರು: ಜೀವ ಸಂಕುಲವನ್ನು ರಕ್ಷಿಸುವ ಜೀವ ಜಲವನ್ನು ನಾವು ರಕ್ಷಿಸದಿದ್ದರೆ, ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಡೂರು ತಾಲ್ಲೂಕಿನ ಬಿಳುವಾಲ ಗ್ರಾಮದಲ್ಲಿ ಗುರುವಾರ ತಾಲ್ಲೂಕಿನ 29 ಕೆರೆಗಳನ್ನು ತುಂಬಿಸುವ ₹ 750 ಕೋಟಿ ವೆಚ್ಚದ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘ನಮ್ಮ ಹಿರಿಯರು ನಮಗೆ ಅಪೂರ್ವ ಸಂಪತ್ತನ್ನು ಬಿಟ್ಟು ಹೋಗಿದ್ದರು. ಅದನ್ನು ನಾವು ಹಾಳು ಮಾಡಿದ್ದೇವೆ. ಪರಿಸರ ನಾಶವಾಗಿದೆ, ಕಾಡು ಇಲ್ಲವಾಗಿದೆ. ಕೆರೆಗಳು ಒಣಗಿ ಹೋಗಿ ಅನ್ನದಾತ ಕಂಗಾಲಾಗಿದ್ದಾನೆ. ಸರ್ಕಾರ ಅನೇಕ ತಪ್ಪುಗಳನ್ನು ಮಾಡಿ ಅನಾಹುತಗಳು ಆಗಿದ್ದರೂ ಇತ್ತೀಚೆಗೆ ಸ್ವಲ್ಪ ಬುದ್ಧಿ ಬಂದಿದೆ. ಕೆರೆಗಳನ್ನು ತುಂಬಿಸಲು ಮುಂದಡಿಯಿಡುತ್ತಿರುವುದು ರೈತರ ಪಾಲಿಗೆ ಆಶಾದಾಯಕವಾಗಿದೆ’ ಎಂದರು.

ADVERTISEMENT

ಬಯಲುಸೀಮೆ ಕಡೂರಿನ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆಯ ಪ್ರಥಮ ಹಂತದ ಕಾಮಗಾರಿ ಆರಂಭವಾಗಿರುವುದು ಈ ಭಾಗ ಹಸಿರಾಗುವಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಇದಕ್ಕಾಗಿ ಶಾಸಕ ವೈ.ಎಸ್‌.ವಿ. ದತ್ತ ಅವರ ಹೋರಾಟದ ಮತ್ತು ಬದ್ಧತೆಯ ಕಾರ್ಯಕ್ಷಮತೆ ಮೆಚ್ಚುವಂಥಹದ್ದು ಎಂದು ಅವರು ಹೇಳಿದರು.

ಕುಪ್ಪೂರು ಗದ್ದುಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಬರದ ನಾಡಿಗೆ ಭದ್ರೆಯ ನೀರು ಹರಿದು ಬರಲಿದೆ ಎಂಬುದೇ ಚೇತೋಹಾರಿ ಸಂಗತಿ. ಇದರ ಹಿಂದಿರುವ ಪ್ರಯತ್ನ ಮತ್ತು ನೋವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಈಗ ತುಂಬಲಿರುವ 32 ಕೆರೆಗಳ ಜತೆಗೆ ತಾಲ್ಲೂಕಿನ 102 ಕೆರೆಗಳನ್ನು ತುಂಬಿಸುವ ಗೊಂದಿ ಯೋಜನೆ ಸರ್ಕಾರದ ಮುಂದಿದ್ದು, ಶೀಘ್ರ ಅನುಮೋದನೆ ನೀಡಿದರೆ ಕಡೂರು ತಾಲ್ಲೂಕು ಸಮೃದ್ಧವಾಗುವುದರಲ್ಲಿ ಸಂಶಯವಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಶಾಸಕ ವೈ.ಎಸ್.ವಿ. ದತ್ತ, ‘ಈ ಯೋಜನೆ ಸಾಕಾರವಾಗಲು ಬಹಳಷ್ಟು ಶ್ರಮಪಟ್ಟಿದ್ದೇನೆ. ಎದುರಾದ ಕಷ್ಟಗಳು ನೋವು ಮರೆಯುವಂತಿಲ್ಲ. ನಮ್ಮ ಜಿಲ್ಲೆಯ ನದಿಗಳು ಬೇರೆ ಜಿಲ್ಲೆಗಳಿಗೆ ಸಹಾಯಕವಾಗಿದ್ದು, ಕಡೂರಿನ ಬಾಯಾರಿಕೆಯನ್ನು ತಣಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿತ್ತು. ಆಗ ವಿಧಾನ ಪರಿಷತ್ ಸದಸ್ಯನಾಗಿದ್ದ ನನಗೆ ನೀರಾವರಿ ಎಂಜಿನಿಯರ್ ಆಗಿದ್ದ ರಾಜ್‌ ಕುಮಾರ್ ಅವರು ನೀಡಿದ ಸಲಹೆ ತಾಲ್ಲೂಕಿನ ರೈತರ ನಿಯೋಗದೊಂದಿಗೆ ಆಗಿನ ಮುಖ್ಯಮಂತ್ರಿ ಸದಾನಂದ ಗೌಡರನ್ನು ಭೇಟಿ ಮಾಡಲು ಪ್ರೇರೇಪಿಸಿತು. ಭದ್ರಾ ಮೇಲ್ದಂಡೆ ಯೋಜನೆಯಿಂದ ಕಡೂರಿನ ಮೂರು ಕೆರೆಗಳು ಮಾತ್ರ ತುಂಬುವ ಅವಕಾಶ ಸದಾನಂದ ಗೌಡರು ಯೋಜನೆಯ ಮರು ಸರ್ವೇ ಮಾಡಲು ನೀಡಿದ ಆದೇಶದಿಂದ 29 ಕೆರೆಗಳು ಹೆಚ್ಚುವರಿಯಾಗಿ ತುಂಬುವ ಅವಕಾಶ ದೊರೆಯಿತು. ಸದಾನಂದ ಗೌಡರ ಕೊಡುಗೆಯನ್ನು ಮರೆಯುವಂತಿಲ್ಲ. ನಂತರದಲ್ಲಿ ಸಿದ್ದರಾಮಯ್ಯನವರು ಈ ಯೋಜನೆಗೆ ನೀಡಿದ ಪ್ರಾಮುಖ್ಯತೆಯನ್ನು ಸ್ಮರಿಸುತ್ತೇನೆ ಎಂದರು.

ರಾಜಕೀಯ ದಾಳವಾಗಿದ್ದ ಹೆಬ್ಬೆ ಯೋಜನೆ ಕಾರ್ಯಸಾಧುವಲ್ಲ ಎಂದು ಸರ್ಕಾರ ಕೈಬಿಟ್ಟ ನಂತರ ಸದನದಲ್ಲಿ ಪರ್ಯಾಯ ವ್ಯವಸ್ಥೆ ಏನು, ಕಡೂರಿಗೆ ಅಳವಡಿಕೆಯಾಗಿರುವ 1.538 ಟಿಎಂಸಿ ನೀರಿನ ಬಳಕೆ ಹೇಗೆ ಎಂಬ ಪ್ರಶ್ನೆ ಮಾಡಿದಾಗ ಪರ್ಯಾಯ ಯೋಜನೆಯೊಂದನ್ನು ನೀವೇ ತಯಾರಿಸಿ. ಕಾರ್ಯಸಾಧುವಾಗಿದ್ದರೆ ಅನುಮೋದನೆ ಮಾಡುವ ಭರವಸೆಯನ್ನು ಸರ್ಕಾರ ನೀಡಿದಾಗ ಭದ್ರಾವತಿ ಬಳಿಯ ಗೊಂದಿ ಅಣೆಕಟ್ಟಿನಿಂದ ತಾಲ್ಲೂಕಿನ 102 ಕೆರೆಗಳನ್ನು ತುಂಬಿಸುವ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಆ ಯೋಜನೆ ಸಾಕಾರಗೊಂಡಲ್ಲಿ ಕಡೂರು ಸಮೃದ್ಧವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಗಿನೆಲೆ ಕೆ.ಆರ್.ನಗರ ಶಾಖಾಮಠದ ಶಿವಾನಂದಪುರಿ ಸ್ವಾಮಿ, ಯಳನಡು ಮಠದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮಿ, ಕೆ. ಬಿದರೆ ದೊಡ್ಡಮಠದ ಪ್ರಭುಕುಮಾರಸ್ವಾಮಿ, ಪತ್ರಕರ್ತ ಸ.ಗಿರಿಜಾಶಂಕರ, ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಅಧ್ಯಕ್ಷ ಕೋಡಿಹಳ್ಳಿ ಮಹೇಶ್, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ವೈ.ಎಸ್. ರವಿಪ್ರಕಾಶ್, ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್, ಶೂದ್ರ ಶ್ರೀನಿವಾಸ್, ಸೀಗೆಹಡ್ಲು ಹರೀಶ್, ಬಿಳುವಾಲ ಪ್ರಕಾಶ, ಬಿ.ಕೆ. ಕೃಷ್ಣಮೂರ್ತಿ(ಮಾಜಿ), ಬಿ.ಟಿ. ಗಂಗಾಧರನಾಯ್ಕ, ನೇತ್ರಾವತಿ ಸತೀಶ್ ಇದ್ದರು.

ಪರೀಕ್ಷೆ ಬರೆದಿದ್ದೇನೆ: ಶಾಸಕ ದತ್ತ
ಬಿಳುವಾಲ ಮತ್ತು ಚಿಕ್ಕಬಾಸೂರು ನಡುವೆ ಕಾಮಗಾರಿಗೆ ಭೂಮಿಪೂಜೆ ನಡೆಸಲಾಯಿತು. ಅಲ್ಲಿಂದ ಸಭಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಶಾಸಕ ವೈ.ಎಸ್‌.ವಿ. ದತ್ತ ಮತ್ತು ಅವರ ಪತ್ನಿ ನಿರ್ಮಲದತ್ತ ಹಾಗೂ ಅವರ ಸಹೋದರಿಯರು, ಕುಪ್ಪೂರು ಮತ್ತು ಯಳನಡು ಶ್ರೀಗಳ ಜತೆ 32 ಕೆರೆಗಳ ಅಚ್ಚುಕಟ್ಟುದಾರರು ನಡೆದು ಬಂದಿದ್ದು ವಿಶೇಷ. ವೇದಿಕೆಯಲ್ಲಿ ಮಲ್ಲಿಗೆ ಸುಧೀರ್ ತಂಡದಿಂದ ಗಾಯನ ನಡೆಯಿತು.

ಪ್ರಸ್ತಾವನೆಯಲ್ಲಿ ಶಾಸಕ ದತ್ತ ಅವರು ಈ ಯೋಜನೆಯ ಬಗ್ಗೆ ಮೊದಲು ಸಲಹೆ ನೀಡಿದ ಎಂಜಿನಿಯರ್ ರಾಜ್‌ಕುಮಾರ್ ಅವರನ್ನು ಪರಿಚಯಿಸಿದ ಪತ್ರಕರ್ತ ಪರಮೇಶ್ ಅವರನ್ನು ಸ್ಮರಿಸಿದರು. ಗೊಂದಿ ಯೋಜನೆ ಅನುಮೋದನೆ ಹಂತದಲ್ಲಿರುವಾಗಲೇ ಬಿ.ಎಲ್. ಶಂಕರ್ ಅವರು ಮತ್ತೆ ಹೆಬ್ಬೆ ನೀರು ತರುವ ವಿಚಾರವನ್ನು ಎತ್ತಿದ್ದರಿಂದ ಆ ಯೋಜನೆ ವಿಳಂಬವಾಗಿದೆ. 5 ವರ್ಷದಿಂದ ಪರೀಕ್ಷೆ ಬರೆದಿದ್ದೇನೆ. ಮೌಲ್ಯಮಾಪನ ಮೇ ನಲ್ಲಿ ನಡೆಯಲಿದೆ. ಪಾಸಾದರೆ ಈ ಯೋಜನೆ ಸಾಕಾರಗೊಳಿಸುವುದು ಶತಸಿದ್ಧ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.