ADVERTISEMENT

ತುಳುವೈಭವದಲ್ಲಿ ಮನಸೆಳೆದ ಕೋಳಿ ಅಂಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2014, 9:36 IST
Last Updated 3 ಫೆಬ್ರುವರಿ 2014, 9:36 IST
ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲ್ಲೂಕು ತುಳುಕೂಟದ ವತಿಯಿಂದ ಭಾನುವಾರ ನಡೆದ ಕೋಳಿ ಅಂಕದ ದೃಶ್ಯ
ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲ್ಲೂಕು ತುಳುಕೂಟದ ವತಿಯಿಂದ ಭಾನುವಾರ ನಡೆದ ಕೋಳಿ ಅಂಕದ ದೃಶ್ಯ   

ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತಾಲ್ಲೂಕು ತುಳುಕೂಟದ ವತಿಯಿಂದ ಎರಡು ದಿನಗಳ ಕಾಲ ನಡೆದ ತುಳು ವೈಭವ 2014ರಲ್ಲಿ ಭಾನುವಾರ  ತುಳುನಾಡಿನ ಕೋಳಿ ಅಂಕವನ್ನು ನಡೆಸಲಾಯಿತು.

ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಸಿದ್ದ ಕಾರ್ಯಕ್ರಮವನ್ನು, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಕೋಳಿ ಅಂಕದ ಕೋಳಿಗಳನ್ನು ವೀಕ್ಷಿಸಿ ಜೊತೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆ 11ಕ್ಕೆ ಪ್ರಾರಂಭವಾದ ಕೋಳಿ ಅಂಕ ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ಸಾವಿರಾರು ಜನರ ಸಮ್ಮುಖದಲ್ಲಿ ಜರುಗಿತು.

ತಾಲ್ಲೂಕಿನ ವಿವಿಧೆಡೆಯಿಂದ 100 ಅಧಿಕ ಕೋಳಿಗಳು ಆಗಮಿಸಿದ್ದು, ಅಂತಿಮ ಗೆಲವು ಸಾಧಿಸಿದ ಮೂರು ಕೋಳಿಗಳಿಗೆ ತಲಾ 5ಸಾವಿರ, 3ಸಾವಿರ ಮತ್ತು ಒಂದುವರೆ ಸಾವಿರ ರೂಪಾಯಿಯನ್ನು ಬಹುಮಾನವಾಗಿ ನೀಡಲಾಯಿತು ಎಂದು ತುಳುಕೂಟದ ಪದಾಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.

ಕೋಳಿ ಅಂಕ: ಮಲೆನಾಡಿಗೆ ಹೊಸತನವಾದ ಕೋಳಿ ಅಂಕವನ್ನು ವೀಕ್ಷಿಸಲು ಸಾವಿರಾರು ಜನರು ಹೊಯ್ಸಳ ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಕೋಳಿ ಅಂಕದ ಈ ಆಟದಲ್ಲಿ ಕೋಳಿ ಅಂಕಕ್ಕಾಗಿಯೇ ಸಾಕಿರುವ ಸಮ ಬಲದ ಎರಡು ಹುಂಜಗಳನ್ನು ಎದುರು ಬದರು ನಿಲ್ಲಿಸಿ, ಎರಡೂ ಕೋಳಿಗಳು ಕಚ್ಚಾಡುತ್ತವೇ ಎಂದು ಪರೀಕ್ಷಿಸಿ, ಎರಡು ಕೋಳಿಗಳನ್ನು ಮೊದಲು ಜೊತೆ ಮಾಡುತ್ತಾರೆ.

ಕಚ್ಚಾಡಲು ಸಿದ್ದವಾದ ಎರಡು ಕೋಳಿಗಳ ಒಂದೊಂದು ಕಾಲಿಗೆ ಹರಿತವಾದ ಚಿಕ್ಕ ಚಾಕುಗಳನ್ನು ಕಟ್ಟಿ, ಎರಡೂ ಕೋಳಿಗಳನ್ನು ಕಚ್ಚಾಡಲು ಬಿಡಲಾಗುತ್ತದೆ. ಈ ಎರಡು ಕೋಳಿಗಳಲ್ಲಿ ಯಾವುದು ಮೊದಲು ಸೋಲುತ್ತದೋ ಅಥವಾ ಸಾವನ್ನಪ್ಪುತ್ತದೋ ಅದು ಸ್ಪರ್ಧೆಯಲ್ಲಿ ಸೋಲನ್ನು ಅನುಭವಿಸುತ್ತದೆ.

ಉಳಿದ ಕೋಳಿ ಸ್ಫರ್ಧೆಯಲ್ಲಿ ಗೆಲವು ಸಾಧಿಸಿತು ಎಂದು ಘೋಷಿಸಲಾಗುತ್ತದೆ. ಸ್ಪರ್ಧೆಗೆ ಬರುವ ಬಹುತೇಕ ಕೋಳಿಗಳು ಹರಿತವಾದ ಚಾಕುವಿನ ಹೊಡೆತಕ್ಕೆ ಸಿಲುಕಿ ಸಾಯುತ್ತವೆ.

ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದ ಕೋಳಿ ಅಂಕವನ್ನು ವೀಕ್ಷಿಸಲು ತಹಶೀಲ್ದಾರ್‌ ಶಿವರಂಗಪ್ಪ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿ.ಪಂ. ಸದಸ್ಯ ಎಂ.ಎಸ್‌. ಅನಂತ್‌ ಮುಂತಾದವರು ಆಗಮಿಸಿದ್ದರು. ತುಳುಕೂಟದ ಅಧ್ಯಕ್ಷ ನರೇಂದ್ರಶೆಟ್ಟಿ, ಪದಾಧಿಕಾರಿಗಳಾದ ಅಶೋಕ್‌ಶೆಟ್ಟಿ, ಜನಾರ್ದನ, ಚಂದ್ರಶೇಖರ, ಜಾನಪ್ಪ, ಆನಂದ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.