ADVERTISEMENT

ದತ್ತಪಾದುಕೆ ಸ್ಥಾಪಿಸಲು ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 5:45 IST
Last Updated 4 ಅಕ್ಟೋಬರ್ 2012, 5:45 IST

ಚಿಕ್ಕಮಗಳೂರು: ದತ್ತಪೀಠದಲ್ಲಿ ದತ್ತಪಾದುಕೆಗಳನ್ನು ಪ್ರತಿಷ್ಠಾಪಿಸದಿರುವ ಜಿಲ್ಲಾಡಳಿತದ ಧೋರಣೆ ಖಂಡಿಸಿ ಶ್ರೀರಾಮಸೇನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಧರಣಿ ನಡೆಸಿದರು.

ಹಳೇ ತಾಲ್ಲೂಕು ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾನಿರತರು, ಮುಖ್ಯ ರಸ್ತೆಯಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಆಚರಣ ತಲುಪಿ, ಅಲ್ಲಿ ಧರಣಿ ನಡೆಸಿದರು. ಕೂಡಲೇ ಜಿಲ್ಲಾಡಳಿತ ದತ್ತಪಾದುಕೆಗಳ ಪುನರ್ ಪ್ರತಿಷ್ಠಾಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ಆಜಾದ್ ವೃತ್ತದಲ್ಲಿ ಮಾತನಾಡಿದ ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ಕುಮಾರ್ ಕಟ್ಟಿನಮನೆ, ಇದೇ 7ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಕಾರ್ಯಕಾರಣಿಯಲ್ಲಿ ಮುಂದಿನ ಹೋರಾಟ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ದತ್ತಪಾದುಕೆಗಳನ್ನು ದತ್ತಪೀಠದ ಗುಹೆಯಲ್ಲಿ ಪ್ರತಿಷ್ಠಾಪಿಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಯಿತು ಎಂದು ಹೇಳಿದರು.

ಕಳೆದ ನಾಲ್ಕು ವರ್ಷದ ಹಿಂದೆ ದತ್ತಪೀಠದ ಗುಹೆ ಮೇಲ್ಛಾವಣಿ ಕುಸಿದಿದ್ದರಿಂದ ಸುರಕ್ಷತೆ ದೃಷ್ಟಿಯಿಂದ ದತ್ತಪಾದುಕೆಗಳನ್ನು ಖಜಾನೆಯಲ್ಲಿ ಇಡಲಾಗಿದೆ. ಈಗ ದುರಸ್ತಿ ಪೂರ್ಣಗೊಂಡಿರುವುದರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿ ಕೊಡಲು ಪಾದುಕೆಗಳನ್ನು ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪಾದುಕೆಗಳ ಪ್ರತಿಷ್ಠಾಪನೆಗೆ ಒತ್ತಾಯಿಸಿ ಕಳೆದ ಸೆ.3ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ 15ದಿನಗಳ ಕಾಲಾವಕಾಶ ಕೋರಲಾಗಿತ್ತು. ಪಾದುಕೆಗಳ ಪುನರ್ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಮುಂದಾಗದಿದ್ದರೆ ರಾಜ್ಯದಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೇನೆ ಜಿಲ್ಲಾ ಅಧ್ಯಕ್ಷ ಬಾಳೆಹೊನ್ನೂರು ಮಂಜುನಾಥ, ಉಪಾಧ್ಯಕ್ಷರಾದ ಬಾಳೆಹೊ ನ್ನೂರು ಗೌತಮ್, ಶೃಂಗೇರಿ ಅರ್ಜುನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಯಿಗೆರೆ ಲಕ್ಷ್ಮಣ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಪುರ ಮಂಜುನಾಥ, ಕೊಪ್ಪ ತಾಲ್ಲೂಕು ಅಧ್ಯಕ್ಷ ನರಸೀಪುರ ಸತೀಶ್, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಅಭಿಲಾಷ್, ನರಸಿಂಹರಾಜಪುರ ತಾಲ್ಲೂಕು ಅಧ್ಯಕ್ಷ ರಮೇಶ್, ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ಅರ್ಜುನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.