ADVERTISEMENT

ದಾಂಪತ್ಯ ಬದುಕಿಗೆ 16 ಜೋಡಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 9:00 IST
Last Updated 9 ಜೂನ್ 2011, 9:00 IST
ದಾಂಪತ್ಯ ಬದುಕಿಗೆ 16 ಜೋಡಿ
ದಾಂಪತ್ಯ ಬದುಕಿಗೆ 16 ಜೋಡಿ   

ಶೃಂಗೇರಿ : ಇಲ್ಲಿನ ಪಟ್ಟಣ ಪಂಚಾಯಿತಿ ಡಾ. ವಿ.ಆರ್. ಗೌರಿಶಂಕರ್ ಸಭಾಂಗಣದಲ್ಲಿ ಬುಧವಾರ ಭಾರತ್ ವಿಕಾಸ್ ಪರಿಷತ್ ವಿದ್ಯಾಶಂಕರ ಶಾಖೆ ಹಾಗೂ ಶಾರದಾ ಪೀಠದ ಆಶ್ರಯದಲ್ಲಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ಸಾರ್ವಜನಿಕ ಉಚಿತ ವಿವಾಹ ಮಹೋತ್ಸವದಲ್ಲಿ 16 ಜೋಡಿ ಸತಿಪತಿಗಳಾಗುವ ಮೂಲಕ ಗೃಹಸ್ಥಾಶ್ರಮ ಪ್ರವೇಶಿಸಿದರು.

ಪೂರ್ವ ನಿಗದಿಯಂತೆ ಬೆಳಿಗ್ಗೆ 10.25ರ ಶುಭ ಮುಹೂರ್ತದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಶಾರದ ಪೀಠದ ಅಧಿಕಾರಿ ಶ್ರೀಪಾದರಾವ್ ನೂತನ ಜೋಡಿಗೆ ಮಾಂಗಲ್ಯಸರ, ಕಾಲುಂಗುರ ವಿತರಿಸಿ ಶುಭ ಹಾರೈಸಿದರು. ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶ್ರೀಪಾದರಾವ್, ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶ್ರೀಮಠದ ಸಹಕಾರ ನಿರಂತರವಾಗಿ ದೊರೆಯಲಿದ್ದು, ವಿವಾಹ ಮಹೋತ್ಸವದಲ್ಲಿ ಸತಿ ಪತಿಗಳಾದವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಂ.ಎಸ್. ರಂಗನಾಥ್ ಮಾತನಾಡಿ, ಕಾರ್ಯಕ್ರಮದ ಕುರಿತಾಗಿ ಮೆಚ್ಚುಗೆ ಸೂಚಿಸಿದರು. ತಹಸೀಲ್ದಾರ್ ಜಗದೀಶ್ ಮಾತನಾಡಿ, ಸಂಪ್ರದಾಯಗಳಿಗಿಂತ ಆತ್ಮಸಾಕ್ಷಿಯಾಗಿ ಒಬ್ಬರನ್ನೊಬ್ಬರು ಸಾರ್ವಜನಿಕರ ಸಮ್ಮುಖದಲ್ಲಿ ವಿವಾಹವಾಗುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಎಂ. ಗೋಪಾಲ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಂ. ಅರುಣಕುಮಾರ್ ಹಾಗೂ ಆದಿಚುಂಚನಗಿರಿ ಬಿಜಿಎಸ್ ಕಾಲೇಜು ಪ್ರಾಂಶುಪಾಲ ಕೆ.ಸಿ. ನಾಗೇಶ್ ಮಾತನಾಡಿದರು. ಭಾರತ್ ವಿಕಾಸ್ ಪರಿಷತ್ ವಿದ್ಯಾಶಂಕರ ಶಾಖೆ ಅಧ್ಯಕ್ಷ  ಎ.ಎಸ್. ನಯನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಸುಮಾರು 40 ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮಾ ಸೋಮಶೇಖರ್, ವಿವಾಹ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಟಿ.ಕೆ. ಪರಾಶರ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರೊ. ನಾಗೇಶ್ ಕಾಮತ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಜಿ. ಮಂಜುನಾಥ್, ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಗೌರವ ಅಧ್ಯಕ್ಷ ಬಿ.ಎನ್. ಶೇಷಗಿರಿಯಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್. ಚಂದಶೇಖರ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ ಶೇಖರ್, ಪೌರಸೇವಾ ನೌಕರರ ಸಂಘ, ಶೃಂಗೇರಿ ಶಾಖೆ ಅಧ್ಯಕ್ಷ ವಿಜಯೇಂದ್ರ, ಜ್ಞಾನಭಾರತಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಲಕ್ಷ್ಮೀನಾರಾಯಣಭಟ್, ಶಿಶು ಅಭಿವೃದ್ಧಿ ಅಧಿಕಾರಿ ಟಿ.ಎಲ್. ಉಮೇಶ್, ವಿಶ್ವಕರ್ಮ ಸೇವಾ ಸಮಾಜದ ಉಪಾಧ್ಯಕ್ಷ ವೆಂಕಟೇ ಶ ಆಚಾರ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಪ್ರದೀಪ್ ಚೋಳರಮನೆ, ವಿದ್ಯಾತೀರ್ಥ ಸೇವಾ ಭಾರತೀ ಟ್ರಸ್ಟ್ ಅಧ್ಯಕ್ಷ ಕೆ.ವಿ. ರಮೇಶ್, ಭಾರತಿ ಹೆಲ್ಪ್ ಲೈನ್‌ನ ಶೋಭಾ ಅನಂತಯ್ಯ, ಅಂಗನವಾಡಿ ಕಾರ್ಯಕರ್ತೆಯಾದ ಸಂಘದ ಅಧ್ಯಕ್ಷೆ ರಮಾದೇವಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಮಿತಾ ಸತ್ಯನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.