ಕೊಪ್ಪ: ವಿಶ್ವಮಾನವ ಸಂದೇಶ ಸಾರಿದ `ರಾಷ್ಟ್ರಕವಿ' ಕುವೆಂಪು ಅವರ ಜನ್ಮಸ್ಥಳ, ತಾಲ್ಲೂಕಿನ ಹಿರೇಕೊಡಿಗೆಯ `ಕುವೆಂಪು ಸಂದೇಶ ಭವನ'ದ ದುಃಸ್ಥಿತಿ ಬಗ್ಗೆ ಅಮೆರಿಕಾದ `ಈ-ಕವಿ' ಮತ್ತು `ಅಕ್ಕ' ಸಂಘಟನೆಗಳ ಸ್ಥಾಪಕ ಸಂಚಾಲಕ ವಿ.ಎಂ.ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದಿನ ಸರ್ಕಾರ ಕುವೆಂಪು ಸಂದೇಶ ಭವನದ ಅಭಿವೃದ್ಧಿಗಾಗಿ ವರ್ಷದ ಹಿಂದೆ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಿದ ಕಾಮಗಾರಿಗಳೆಲ್ಲ ಕಳಪೆಯಾಗಿದ್ದು, ಗ್ರಂಥಾಲಯ ಅತಿಥಿ ಭವನದ ಗೋಡೆಗಳು ಬಿರುಕು ಬಿಟ್ಟಿವೆ. ಎದುರಿನ ನೆಲಹಾಸಿಗೆ ಬಳಸಿದ್ದ ಸಿಮೆಂಟ್ ಇಟ್ಟಿಗೆಗಳನ್ನು ಜೌಗು ಮಣ್ಣಿನ ಮೇಲೆ ಜೋಡಿಸಿದ್ದರಿಂದ ಕುಸಿದು, 3-4 ಕಡೆ ದೊಡ್ಡ ಕಂದಕ ನಿರ್ಮಾಣವಾಗಿದೆ.
ಅಭಿವೃದ್ಧಿ ಕಾಮಗಾರಿ ವೇಳೆ ಜಾಗ ವಿಸ್ತರಣೆ ಮಾಡಲು ಪಕ್ಕದ ಗುಡ್ಡವನ್ನು ಕೊರೆದಿದ್ದು, ತಡೆಗೋಡೆ ನಿರ್ಮಿಸದಿರುವುದರಿಂದ ಗುಡ್ಡ ಜರಿದು ಸಂದೇಶ ಭವನಕ್ಕೆ ಹೋಗುವ ದಾರಿಯಲ್ಲಿ ಮಣ್ಣು ತುಂಬಿಕೊಂಡಿದೆ. ಮಳೆಗಾಲದಲ್ಲಿ ಸಂದೇಶ ಭವನದ ಆವರಣದಲ್ಲಿ ಗುಡ್ಡದ ನೀರೆಲ್ಲ ತುಂಬಿಕೊಳ್ಳುತ್ತಿದ್ದು, ಗುಡ್ಡದಿಂದ ಜರಿದು ಬಿದ್ದ ಮಣ್ಣನ್ನೇ ರಸ್ತೆಗೆ ಸುರಿದು ತಾತ್ಕಾಲಿಕ ತಡೆ ನಿರ್ಮಿಸಲಾಗಿದೆ.
ಅತಿಥಿ ಭವನದ ಬಾಗಿಲ ತಳದಲ್ಲಿ ಹಾವುಗಳು ನುಸುಳುವಷ್ಟು ಅಂತರವಿದ್ದು, ಚಿಲಕಗಳಿಗೆ ತುಕ್ಕು ಹಿಡಿದಿದೆ. ಮೇಲಂತಸ್ತಿನಲ್ಲಂತೂ ಪಾರಿವಾಳಗಳ ಹಿಕ್ಕೆ ಪುಕ್ಕದ ರಾಶಿ ಬಿದ್ದಿದೆ. ಸರಿಯಾದ ನಿರ್ವಹಣೆಯಿಲ್ಲದೆ ಕೊಠಡಿಗಳು ಹಾಳುಬಿದ್ದಿವೆ.
ದುರಸ್ತಿ ಸಂದರ್ಭದಲ್ಲಿ 1989ರಲ್ಲಿ ಸಂದೇಶ ಭವನಕ್ಕೆ ಶಿಲಾನ್ಯಾಸ ಮಾಡಿದ ಮಹನೀಯರ ಹೆಸರಿನ ಶಿಲಾಫಲಕವನ್ನು ಸ್ಥಳಾಂತರಿಸುವ ಬದಲು ಅದರ ಮೇಲೇ ಮಣ್ಣು ತುಂಬಿದ್ದರಿಂದ ಅರ್ಧದಷ್ಟು ಹೂತುಹೋಗಿದೆ. ಪಕ್ಕದಲ್ಲಿ ನಿರ್ಮಿಸಿರುವ ಸಿಮೆಂಟ್ ಬೆಂಚ್‌ಗಳು ಮುರಿದುಬಿದ್ದಿವೆ. ಕಾಂಪೌಡ್‌ಗಳು ಎಲ್ಲ ಕಡೆ ಬಿರುಕು ಬಿಟ್ಟಿವೆ.
ನಾಡಿನ ಜನತೆಗೆ ವೈಚಾರಿಕ ತಳಹದಿ ಹಾಕಿಕೊಟ್ಟ ಕುವೆಂಪು ಅವರಿಗೆ ಜನ್ಮಕೊಟ್ಟ ಪುಣ್ಯನೆಲದಲ್ಲಿ ಈ ರೀತಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಇಲ್ಲಿನ ದುಃಸ್ಥಿತಿ ಬಗ್ಗೆ ಹಿಂದೆಯೂ ಹಲವಾರು ಬಾರಿ ಸ್ಥಳೀಯ ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಯಾರೂ ಸ್ಪಂದಿಸಿಲ್ಲ. ಹೀಗೇ ಆದರೆ ಕುವೆಂಪು ಸ್ಮಾರಕ ಉಳಿಯುವುದು ಕಷ್ಟ ಎಂದು ನೊಂದು ನುಡಿದಿದ್ದಾರೆ.
ತಾವು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿದ್ದರೂ ಆಗಾಗ್ಗೆ ಭಾರತಕ್ಕೆ ಬಂದಾಗಲೆಲ್ಲ ಇಲ್ಲಿಗೆ ಭೇಟಿ ಕೊಡುವ ಪರಿಪಾಠ ಇಟ್ಟುಕೊಂಡಿದ್ದಾಗಿ ತಿಳಿಸಿರುವ ಅವರು, ಕನ್ನಡದ ಸೇವೆಯಲ್ಲಿ ನಿರಂತರ ತೊಡಗಿಕೊಂಡಿರುವ ತಾವು ಕುವೆಂಪು ಅವರ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದು, ಸಾಹಿತಿ ಚಂದ್ರಶೇಖರ ಕಂಬಾರ, ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿಯ ಅವರೊಂದಿಗೆ ಸೇರಿ ಕನ್ನಡ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದನ್ನು ಸ್ಮರಿಸಿದರು.
ಕಳೆದ ವರ್ಷ ಅಲಿಗೆ ಪುಟ್ಟಯ್ಯ ನಾಯ್ಕರ ಗ್ರಂಥ ಬಿಡುಗಡೆ ಕಾರ್ಯಕ್ರಮದ ಸಂದರ್ಭ ಇಲ್ಲಿಗೆ ಬಂದಿದ್ದಾಗ ಸಂದೇಶ ಭವನದಲ್ಲಿ ನೀರು ತುಂಬಿಕೊಂಡಿತ್ತು. ಕೂಡಲೇ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರ ಗಮನಕ್ಕೆ ತಂದಿದ್ದಾಗಿ ತಿಳಿಸಿದ ಅವರು, ಅತಿ ಶೀಘ್ರದಲ್ಲೇ ಇಲ್ಲಿನ ದುಃಸ್ಥಿತಿ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ತಿಳಿಸಿದರು.
ಹಿರೇಕೊಡಿಗೆಯ ವಿಶ್ವಮಾನವ ಪ್ರತಿಷ್ಠಾನದ ಅಧ್ಯಕ್ಷ ಕೋಣೆಗದ್ದೆ ಪದ್ಮನಾಭ ಕಾರ್ಯದರ್ಶಿ ಅಲಿಗೆ ವಿವೇಕಾನಂದ, ರಾಘವೇಂದ್ರ ಭಟ್ ಮುಂತಾದವರು ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.