ಸುರತ್ಕಲ್: ಸುರತ್ಕಲ್‌ನಿಂದ- ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆ ಹೊಂದಿರುವ ನವಯುಗ್ ಕನ್‌ಸ್ಟ್ರಕ್ಷನ್ ಕಂಪೆನಿ ಆಂಧ್ರದ ಜಗನ್‌ಮೋಹನ್ ರೆಡ್ಡಿ ಅವರಿಗೆ ಸೇರಿದ್ದೆಂದು ತಮಗೆ ಗೊತ್ತೇ ಇಲ್ಲ... - ಹೀಗೆಂದು ಹೇಳಿದವರು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೂತ್‌ಗೆ ಭೇಟಿ ನೀಡಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದರು.
ಹಗರಣದಲ್ಲಿ ಸಿಲುಕಿ ಜೈಲುಪಾಲಾಗಿರುವ ಜಗನ್‌ಮೋಹನ್ ರೆಡ್ಡಿ ಅವರಿಗೆ ಸೇರಿರುವ ನವಯುಗ ಕನ್‌ಸ್ಟ್ರಕ್ಷನ್ ಕಂಪೆನಿ ಗುತ್ತಿಗೆ ಪಡೆದಿರುವ ಹೆದ್ದಾರಿ ಕಾಮಗಾರಿ ನೆನೆಗುದಿಗೆ ಬೀಳಬಹುದೇ? ಕೋರ್ಟ್ ತೀರ್ಪು ಕಾಮಗಾರಿಗೆ ಹಿನ್ನಡೆ ಆಗಬಹುದೇ? ಎಂದು ಕಾಮಗಾರಿ ಭವಿಷ್ಯದ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ, ಕಂಪೆನಿ ಜಗನ್‌ಗೆ ಸೇರಿದ್ದೆಂದು ಗೊತ್ತೇ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ. ಹೆದ್ದಾರಿ ಕಾಮಗಾರಿಗೆ ತೊಡಕುಂಟಾಗದಂತೆ ನೋಡಿಕೊಳ್ಳುವುದಾಗಿ ಆಸ್ಕರ್ ಭರವಸೆ ನೀಡಿದರು.
`ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಚರ್ಚೆಗಳು ನಡೆಯುತ್ತಿದೆ. ಪ್ರಣವ್ ಮುಖರ್ಜಿ ಬಗ್ಗೆ ಒಲವು ಇದೆ ಎಂದರು.
ರಾಜ್ಯ ಸರ್ಕಾರದ ಅವ್ಯವಹಾರದ ಬಗ್ಗೆ ಮಾತನಾಡಿ, ಯಾವುದೇ ಕ್ಷಣದಲ್ಲೂ ರಾಜ್ಯ ವಿದಾನ ಸಭೆಗೆ ಚುನಾವಣೆ ಎದುರಾದಲ್ಲಿ ಅದನ್ನು ಎದುರಿಸಲು ಪಕ್ಷ ಸಿದ್ಧವಿದೆ ಎಂದರು.
`ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸ್ವಪ್ರತಿಷ್ಠೆಯಿಂದ ನಾಯಕರ ನಡುವೆ ಹೊಂದಾಣಿಕೆ ಕೊರತೆಯಿದೆ. ಇದನ್ನು ಕೇಂದ್ರದ ಕಾಂಗ್ರೆಸ್ ನಾಯಕತ್ವ ಗಂಭೀರವಾಗಿ ಪರಿಗಣಿಸಿದೆ. ಇದನ್ನು ಸುಲಭವಾಗಿ ಪರಿಹರಿಸಲಾಗುವುದು~ ಎಂದು ಹೇಳಿದರು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿಜಯಕುಮಾರ್ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕ ಅಧ್ಯಕ್ಷ ಬಿ.ಎ.ಮೊಯಿದಿನ್ ಬಾವಾ, ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸತ್ತಾರ್, ಪಾಲಿಕೆ ಸದಸ್ಯ ಅಶೋಕ್ ಶೆಟ್ಟಿ, ಹಸನಬ್ಬ ಮಂಗಳಪೇಟೆ, ಉಲ್ಲಾಸ್ ಆರ್.ಶೆಟ್ಟಿ, ಪುರುಷೋತ್ತಮ ಚಿತ್ರಾಪುರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.