ADVERTISEMENT

ನೂರಾರು ಎಕರೆ ಬಾಳೆ, ಅಡಿಕೆ ನೆಲಸಮ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 8:45 IST
Last Updated 3 ಏಪ್ರಿಲ್ 2012, 8:45 IST

ಕಡೂರು: ತಾಲ್ಲೂಕಿನ ಅತಿ ಹಿಂದುಳಿದ ಪ್ರದೇಶವಾದ ಎಮ್ಮೆದೊಡ್ಡಿಯ ಗಾಂಧಿನಗರ, ಶ್ರೀರಾಂಪುರ, ಬೆಳ್ಳಿಗುತ್ತಿ, ರಂಗೇನಹಳ್ಳಿ, ಮುಸ್ಲಾಪುರಹಟ್ಟಿ, ಗೋಪಾಲಪುರ ಸೇರಿದಂತೆ ಉಳಿದ 24 ಹಳ್ಳಿಗಳಲ್ಲಿ ಶನಿವಾರ ಸಂಜೆ ಸುರಿದ ರೇವತಿ ಮಳೆಯ ಅರ್ಭಟಕ್ಕೆ ಫಸಲಿಗೆ ಬಂದಿದ್ದ ಬಾಳೆ, ಅಡಿಕೆ ನೆಲಕ್ಕುರುಳಿ ಕೋಟ್ಯಂತರ ರೂಪಾಯಿ ನಷ್ಟವಾಗಿ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ.

ಮಳೆಯೊಂದಿಗೆ ಆಲಿಕಲ್ಲುಗಳೂ ಬಿದ್ದಿದ್ದು, ಗಾಂಧಿನಗರದ ರೈತ ದುರ್ಗಾಬೋವಿ, ಮುಸ್ಲಾಪುರ ಹಟ್ಟಿಯ ರಮೇಶ್, ಕುಮಾರ್ ನಾಯ್ಕ, ರೂಪ್ಲಾ ನಾಯ್ಕ, ನಾಗಿಬಾಯಿ, ಶ್ರೀನಿವಾಸ್, ನಾಗಪ್ಪ, ಸತೀಶ್, ಚಂದ್ರನಾಯ್ಕ, ಸಕ್ರನಾಯ್ಕ, ಓಂಕಾರಪ್ಪ, ಹನುಮಯ್ಯ, ಸರ್ತಾಜ್ ಬಾಷಾ, ಮುಳ್‌ಕಟ್ಟಯ್ಯ, ಬೆಳ್ಳುಗುತ್ತಿ ಎಂಬವರ  ಒಟ್ಟು 112 ಎಕರೆ ಬಾಳೆ ತೋಟಗಳು ನೆಲಕ್ಕುರುಳಿವೆ.

`ಬರಗಾಲ ಕಾಡುತ್ತಿದ್ದರೂ ಕೊಳವೆ ಬಾವಿಯ ಸಹಾಯದಿಂದ ನಾಲ್ಕು ಎಕರೆ ಭೂಮಿಯ್ಲ್ಲಲಿ 2 ಲಕ್ಷ ಸಾಲ ಮಾಡಿ ಬಾಳೆ ಹಾಕಿಸಿ ಮನೆ ಮಂದಿಯೆಲ್ಲ ಕಷ್ಟಪಟ್ಟು ಕಾಪಾಡಿದ್ದೆವು. ಶನಿವಾರ ಮಧ್ಯಾಹ್ನ ನಳನಳಿಸುತ್ತಿದ್ದ ತೋಟ ಸಂಜೆಯಾಗುವುದರೊಳಗೆ ನೆಲಕ್ಕುರುಳಿದೆ ಎಂದು ಗಾಂಧಿನಗರದ ರೈತ ದುರ್ಗಬೋವಿ ಕಣ್ಣೀರು ಹಾಕಿದರು.

`ಎಕರೆಯಲ್ಲಿ ಬೆಳೆದ ಬಾಳೆ ಕನಿಷ್ಠ ಒಂದು ಲಕ್ಷ ರೂಪಾಯಿಗೆ ಮಾರಾಟವಾಗುತ್ತಿತ್ತು. 112 ಎಕರೆಗೆ ಒಂದು ಕೋಟಿಗೂ ಅಧಿಕವಾಗಿ ನಷ್ಟವಾಗಿದ್ದರೂ ನಮ್ಮ ಗೋಳನ್ನು ಕೇಳಲು ಇದುವರೆವಿಗೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಬಂದಿಲ್ಲ~ ಎಂದು ಕೆಲವು ರೈತರು ದೂರಿದರು. 

ಮುಸ್ಲಾಪುರ ಗ್ರಾಮದ ನಾಯ್ಕ ಅವರ 12 ಕುರಿಗಳು ಆಲಿಕಲ್ಲು ಹೊಡೆತಕ್ಕೆ ಮೃತಪಟ್ಟಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪ್ರಜಾವಾಣಿಗೆ ಗ್ರಾಮಸ್ಥರು ಮಾಹಿತಿ ನೀಡಿದರು. ಆಲಿಕಲ್ಲುಗಳು ಶನಿವಾರ ಬಿದ್ದರೂ ಸೋಮವಾರ ವಾದರೂ ಕರಗದೇ ಇರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.