ADVERTISEMENT

ಪಡಿತರ ಟೋಕನ್‌ ವಿತರಣೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 6:05 IST
Last Updated 27 ಅಕ್ಟೋಬರ್ 2017, 6:05 IST

ಚಿಕ್ಕಮಗಳೂರು: ಪಡಿತರ ಪಡೆಯಲು ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಟೋಕನ್ ವಿತರಿಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘ, ಬಿಜೆಪಿ ಕಾರ್ಯಕರ್ತರು ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು. ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ಆಹಾರ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ಪಡಿತರ ಪಡೆಯಲು ಟೋಕನ್ ವ್ಯವಸ್ಥೆ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ನ್ಯಾಯಬೆಲೆ ಅಗಡಿಗಳಿಂದ ಪಡಿತರ ಪಡೆಯುವುದಿಲ್ಲ ಎಂದು ಪಡಿತರ ಚೀಟಿದಾರರು ಆಕ್ರೋಶ ವ್ಯಕ್ತಪಡಿಸಿದರು. ಪಡಿತರ ಟೋಕನ್ ಪಡೆಯಲು ನೂರಾರು ಜನ ಹನುಮಂತಪ್ಪ ವೃತ್ತದಲ್ಲಿರುವ ಫ್ರಾಂಚೈಸಿಗಳ ಬಳಿ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಪೊಲೀಸರು ಜನರನ್ನು ಸರದಿ ಸಾಲಿನಲ್ಲಿ ನಿಲ್ಲಿಸುವ ಕಾರ್ಯದಲ್ಲಿ ತೊಡಗಿದ್ದರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಆಹಾರ ಇಲಾಖೆ ಉಪನಿರ್ದೇಶಕ ಮುನಿಸ್ವಾಮಿ ಅವರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ನಗರಸಭೆ ಸದಸ್ಯ ಟಿ.ರಾಜಶೇಖರ ಮಾತನಾಡಿ, ‘ಟೋಕನ್ ಪಡೆಯಲು ಎರಡು ಮೂರು ದಿನಗಳಿಂದ ಜನರು ಕೆಲಸ ಬಿಟ್ಟು ಬಂದು ಕಾಯುವಂತಾಗಿದೆ. ಟೋಕನ್ ವಿತರಿಸಲು ಮೂರು ಅಂಗಡಿಗಳಿಗೆ ಮಾತ್ರ ಅನುಮತಿ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ADVERTISEMENT

ಕೋಟೆ ಬಡಾವಣೆ, ಹೌಸಿಂಗ್ ಬೋರ್ಡ್, ಗವನಹಳ್ಳಿಯಿಂದ ಜನರು ಟೋಕನ್ ಪಡೆಯಲು ಹನುಮಂತಪ್ಪ ವೃತ್ತಕ್ಕೆ ಬರುವಂತಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿಯೇ ಪಡಿತರ ಟೋಕನ್ ನೀಡುವಂತಾಗಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಆಹಾರ ಇಲಾಖೆ ಉಪನಿರ್ದೇಶಕ ಮುನಿಸ್ವಾಮಿ ಮಾತನಾಡಿ, ‘ಪಡಿತರ ಟೋಕನ್ ವಿತರಿಸಲು 10 ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಪಡಿತರ ವಿತರಿಸಲು ಇದೇ 31ರ ವರೆಗೆ ಸಮಯವಿದೆ. ಟೋಕನ್ ವಿತರಿಸಲು ಹೆಚ್ಚಿನ ಅಂಗಡಿಗಳಿಗೆ ಅನುಮತಿ ನೀಡಲಾಗುವುದು. ಗುರುವಾರ ಸರ್ವರ್ ಡೌನ್ ಆಗಿದ್ದರಿಂದ ಸಮಸ್ಯೆಯಾಗಿದೆ’ ಎಂದರು. ನಗರಸಭೆ ಸದಸ್ಯ ರವೀಂದ್ರ ಪ್ರಭು, ಜಯಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.