ADVERTISEMENT

`ಪರಿಶಿಷ್ಟರ ಕಾಲೊನಿ, ತಾಂಡಗಳಿಗೆ ಸೌಲಭ್ಯ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 9:42 IST
Last Updated 20 ಡಿಸೆಂಬರ್ 2012, 9:42 IST

ತರೀಕೆರೆ: ತಾಲ್ಲೂಕಿನ ಎ್ಲ್ಲಲ ಗ್ರಾಮಗಳಿಗೂ ಯಾವುದೇ ತಾರತಮ್ಯ ತೋರದೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗಿದ್ದು, ಪರಿಶಿಷ್ಟರ ಕಾಲೊನಿಗಳಿಗೆ ಮತ್ತು ತಾಂಡಗಳಿಗೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.

ತಾಲ್ಲೂಕಿನ ಶಾಂತವೇರಿ ಗ್ರಾಮದ ಪರಿವರ್ತನಾ ಉದ್ಯಾವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣಾ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ಹಾಗೂ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು ಜನವರಿ 7 ರಂದು ಉಡೇವಾ ಗ್ರಾಮದಲ್ಲಿ ಜಲಾನಯನ ಇಲಾಖೆಯ ವತಿಯಿಂದ ತಾಲ್ಲೂಕಿನ 54 ಸ್ವಸಹಾಯ ಸಂಘ ಮತ್ತು ಸ್ತ್ರೀಶಕ್ತಿ ಸಂಘಗಳ ಅಭಿವೃದ್ಧಿಗಾಗಿ ತಲಾ ರೂ. 50 ಸಾವಿರ ಚೆಕ್ ವಿತರಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ದೇವರಾಜ್ ಮಾತನಾಡಿ, ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಪಕ್ಕದಲ್ಲಿ ಹತ್ತಾರು ವರ್ಷದಿಂದ ವಾಸವಿರುವ ಜನರಿಗೆ ನಿವೇಶನ ಹಕ್ಕು ಪತ್ರವನ್ನು ವಿತರಿಸಿದ್ದು ಮುಂದಿನ ದಿನಗಳಲ್ಲಿ ಮಿಕ್ಕವರಿಗೂ ಹಕ್ಕು ಪತ್ರ ವಿತರಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಕೃಷ್ಣಪ್ಪ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ ನಾಗರಾಜ್, ಸದಸ್ಯ ಬಿ.ಆರ್.ರವಿ, ಲತಾ ತಮ್ಮಯ್ಯ, ಪಿ.ಧರಣೇಶ್, ಕಾರ್ಯನಿರ್ವಹಾಣಾಧಿಕಾರಿ ಸಿ.ದೇವರಾಜಪ್ಪ, ಜಲಾನಯನ ಇಲಾಖೆಯ ಅಧಿಕಾರಿ ಎಂ.ಎಸ್.ಸುರೇಂದ್ರನಾಥ್, ಪಿಡಿಒ ದಿವ್ಯಜ್ಯೋತಿ, ಕಾರ್ಯದರ್ಶಿ ವೀರಭದ್ರಪ್ಪ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.