ADVERTISEMENT

ಪೆನ್ಸಿಲ್ ಮೊನೆಯಲ್ಲಿ ಅರಳಿದ ನ್ಯಾನೋ ಕಡೆಗೋಲು ಕೃಷ್ಣ!

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 8:25 IST
Last Updated 10 ಮಾರ್ಚ್ 2011, 8:25 IST

ಉಡುಪಿ: ಚೂಪಾದ ಪೆನ್ಸಿಲ್‌ನ ಮೊನೆ. ಅದನ್ನು ಒಂದಿಷ್ಟು ಹದ ಮಾಡಿಕೊಂಡು ಬ್ಲೇಡ್‌ನಿಂದ ಕೊರೆಯುತ್ತ, ಅಲ್ಲಲ್ಲಿ ಗೆರೆ ಎಳೆದಂತೆ ಮಾಡುತ್ತ ಚಕಚಕನೆ ಕೈ ಓಡಿಸುತ್ತ ಆ ಕಲಾವಿದ  ಏಕಾಗ್ರತೆಯಿಂದ ಅರೆ ಕ್ಷಣದಲ್ಲಿ ಮೂಡಿಸಿಯೇ ಬಿಟ್ಟ... ಅಗೋ ಕಡೆಗೋಲು ಕೃಷ್ಣ...ಪೆನ್ಸಿಲ್ ಮೊನೆಯಲ್ಲಿ ಕೃಷ್ಣ...ಆದರೆ ಬರಿ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸದ ನ್ಯಾನೋ ಕಡೆಗೋಲು ಕೃಷ್ಣ...ಸೇರಿದ್ದ ಸಭಿಕರ ಚಪ್ಪಾಳೆಯ ನಡುವೆ ಕಡೆಗೋಲು ಕೃಷ್ಣ ಕಡುಗಪ್ಪು ಸೀಸದಿಂದ ಎದ್ದುಬಂದಿದ್ದ...

ಇತ್ತೀಚೆಗಷ್ಟೆ ತಾವು ಪೆನ್ಸಿಲ್ ಮೊನೆಯಲ್ಲಿ ರಚಿಸಿದ ‘ನ್ಯಾನೋ ಗಣೇಶ’ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದ ಗ್ರಾಮೀಣ ಪ್ರತಿಭೆ ಕೊಕ್ಕರ್ಣೆಯ ಕಲಾವಿದ ಸಂಜಯ್ ದಯಾನಂದ ಬುಧವಾರ ಸಂಜೆ ಕೃಷ್ಣಮಠದ ಮಧ್ವಮಂಟಪದಲ್ಲಿ ಕಡೆಗೋಲು ಕೃಷ್ಣನನ್ನೂ ಕೆಲವೇ ನಿಮಿಷದಲ್ಲಿ ನಿರ್ಮಿಸಿ ತಮ್ಮಕೈ ಚಳಕ ನಿರೂಪಿಸಿದರು.

ಗಿನ್ನೆಸ್ ದಾಖಲೆ ಪಡೆದಿದ್ದನ್ನು ಅಧಿಕೃತವಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಕಲಾವಿದ ತನ್ನ ಕೈ ಚಳಕವನ್ನು ನೆರೆದ ಜನರ ಎದುರು ತೋರಿಸಿ ಮೆಚ್ಚುಗೆ ಗಳಿಸಿದ. ಶೀರೂರು ಲಕ್ಷ್ಮಿವರ ತೀರ್ಥರು ಈ ಯುವ ಪ್ರತಿಭೆಗೆ ಗಿನ್ನೆಸ್ ದಾಖಲೆ ಪತ್ರ ಹಸ್ತಾಂತರಿಸಿ ಅಭಿನಂದಿಸಿದರು. ಈ ಸಂದರ್ಭ ಹಾಜರಿದ್ದ ಕ್ರೀಡಾಪಟು ಅಶ್ವಿನಿ ಅಕ್ಕುಂಜೆ ಅವರನ್ನೂ ಸ್ವಾಮೀಜಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ನಮ್ಮ ನಡುವೆ ಬಹಳಷ್ಟು ಸಾಧಕರಿದ್ದಾರೆ. ಆದರೆ ಅವರಿಗೆಲ್ಲ ಸಹಾಯಹಸ್ತ ಬೇಕಾಗಿದೆ. ಇಂದಿನ ಯುವತಿಯರು ಕೇವಲ ಉದ್ಯೋಗಕ್ಕಾಗಿ ಮಾತ್ರವೇ ಹೆಚ್ಚು ಆಸಕ್ತಿ ವಹಿಸುತ್ತಾರೆ. ಆದರೆ ಅಶ್ವಿಯಂತಹ ಪ್ರತಿಭೆಗಳು ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ. ಅವರು ಇನ್ನಷ್ಟು ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದರು.

ಉದ್ಯಮಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಕಲಾವಿದ ಸುರೇಂದ್ರ ಆಗಲಿ ಕ್ರೀಡಾಪಟು ಅಶ್ವನಿಯಾಗಲಿ ನಮ್ಮ ಕುಗ್ರಾಮದ ಪ್ರತಿಭೆಗಳು. ಎಲ್ಲ ಸೌಲಭ್ಯಗಳಿರುವ ನಗರದ ಹುಡುಗರು ಮಾಡಲಾಗದ ಸಾಧನೆ ಇವರದ್ದು. ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದರು.ಪ್ರಾಧ್ಯಾಪಕ  ಸುರೇಂದ್ರನಾಥ ಶೆಟ್ಟಿ, ನಗರಸಭಾ ಅಧ್ಯಕ್ಷ ಕಿರಣ್ ಕುಮಾರ್, ಸತ್ಯನಾರಾಯಣ ಉಡುಪ, ದಿವಾಣ ಲಾತವ್ಯ ಆಚಾರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.