ADVERTISEMENT

ಪ್ರತಿಧ್ವನಿಸಿದ ಬಾಲಕಿಯರ ಹಾಸ್ಟೆಲ್ ಅವ್ಯವಸ್ಥೆ

ನರಸಿಂಹರಾಜಪುರ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 9:36 IST
Last Updated 20 ಡಿಸೆಂಬರ್ 2012, 9:36 IST

ನರಸಿಂಹರಾಜಪುರ:  ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಗೆ ಸೇರಿದ ಬಾಲಕೀಯರ ವಿದ್ಯಾರ್ಥಿನಿಲಯದ ಅವ್ಯವಸ್ಥೆ ತೀವ್ರ ಚರ್ಚೆಗೆ ಗ್ರಾಸವಾಯಿತು.

ಸಭೆಯಲ್ಲಿ ವಿದ್ಯಾರ್ಥಿನಿಲಯ ಸರದಿ ಬಂದಾಗ ವಿಷಯ ಪ್ರಸ್ತಾಪಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿರುವ ವಾರ್ಡನ್ ಕೆಲವು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ತಾವು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ತಿಂಗಳಿಗೊಮ್ಮೆ ಹಾಜರಿ ಪಡೆಯುತ್ತಿರುವ ಬಗ್ಗೆ ಹಾಗೂ ಗೈರು ಹಾಜರಾದವರ ಹೆಸರಿನಲ್ಲೂ ಆಹಾರ ಬಳಸಿ ಕೊಂಡಿರುವ ಅಂಶ ಗಮನಕ್ಕೆ ಬಂದಿದೆ ಎಂದು ದೂರಿದರು.

ಇದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಸುಜಾತಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಧ್ವನಿಗೂಡಿಸಿದರು.ಇಲ್ಲಿನ ವಾರ್ಡನ್‌ಗೆ ನೋಟಿಸ್ ನೀಡಲು ಸಭೆ ತೀರ್ಮಾನಿಸಿತು. ಈ ಬಗ್ಗೆ ಮೇಲಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇವರ ಬಗ್ಗೆ ದೂರು ನೀಡಲು ಸಭೆ ನಿರ್ಧರಿಸಿತು.

ಸರ್ಕಾರಿ ನಾಟಾ ಸಂಗ್ರಹಾಲಯದಲ್ಲಿ ಸೌದೆ ವಿತರಿಸುವ ಕಾರ್ಯವನ್ನು ಕೆಎಸ್‌ಎಫ್‌ಐಸಿಯಿಂದ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸರ್ಕಾರ ಆದೇಶ ಬಂದಿದ್ದು ಅರಣ್ಯ ಇಲಾಖೆಯವರು ಕೂಡಲೇ ಇದನ್ನು ಹಸ್ತಾಂತರಿಸಿ ಕೊಂಡು ಸೌದೆ ವಿತರಿಸುವ ಕಾರ್ಯಕೈಗೊಳ್ಳಬೇಕೆಂದು ಸಭೆ ಅಧಿಕಾರಿಗಳಿಗೆ ಸೂಚಿಸಿತು.

ಮೆಸ್ಕಾಂನಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿಯೂ ವಿದ್ಯುತ್‌ಮಾರ್ಗ ನಿರ್ಮಿಸಲಾಗಿರುತ್ತದೆ. ಈ ಮಾರ್ಗದಲ್ಲಿ ಯಾವುದೇ ವನ್ಯಪ್ರಾಣಿಗಳು ಮೃತಪಟ್ಟರೆ ಅರಣ್ಯ ಇಲಾಖೆಯವರು ಮೆಸ್ಕಾಂ ಇಲಾಖೆಯವರ ಮೇಲೆ ಮೊಕದ್ದಮೆ ದಾಖಲಿಸುತ್ತಾರೆ. ಇದರಿಂದ ಎಲ್ಲಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಮೆಸ್ಕಾಂ ಎಂಜಿನಿಯರ್ ವಿಜಯಕುಮಾರ್ ತಿಳಿಸಿದರು.

ಇದಕ್ಕೆ ಒಪ್ಪದ ಸಭೆ ಜನರ ಅನುಕೂಲಕ್ಕಾಗಿ ವಿದ್ಯುತ್ ಸಂಪರ್ಕ ನೀಡಲೇಬೇಕೆಂದು ಸೂಚಿಸಿತು. ಮಲೆನಾಡಿನ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿರುವುದರಿಂದ ಗ್ಯಾಂಗ್‌ಮನ್‌ಗಳನ್ನು ನೇಮಿಸುವಂತೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ತಾತ್ಕಾಲಿಕ ಪಡಿತರ ಚೀಟಿ ಬಿಪಿಎಲ್ ನೀಡಿ ಕಾಯಂ ಪಡಿತರ ಚೀಟಿ ನೀಡುವಾಗ ಎಪಿಎಲ್ ಪಡಿತರ ಚೀಟಿ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು ಇದರ ಬಗ್ಗೆ ಗಮನ ಹರಿಸುವಂತೆ ಸಭೆ ತಹಶೀಲ್ದಾರರಿಗೆ ಸೂಚಿಸಿತು.

ಇದೇ 21ರಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರೆಲ್ಲರೂ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಅದರಂತೆ ಇಲ್ಲಿ ಆಸ್ಪತ್ರೆಯಲ್ಲೂ ವೈದ್ಯರು ಕಾರ್ಯಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ವೈದ್ಯಾಧಿಕಾರಿ ಸೀಮಾ ಸಭೆಗೆ ಮಾಹಿತಿ ನೀಡಿದರು.

ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ವಿತರಿಸುವ ಸಂದರ್ಭದಲ್ಲಿ ಎಲ್ಲ ಜನಪ್ರತಿನಿಧಿಗಳಿಗೂ ಮಾಹಿತಿ ನೀಡುವಂತೆ ಸಭೆ ಸೂಚಿಸಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮಿತ್ರಾ, ಸ್ಥಾಯಿಸಮಿತಿ ಅಧ್ಯಕ್ಷ ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ್, ಸಹಾಯಕ ನಿರ್ದೇಶಕ ರಾಜೇಗೌಡ, ವ್ಯವಸ್ಥಾಪಕಿ ಮೀನಾಕ್ಷಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.