ADVERTISEMENT

ಪ್ರವಾಹ ಸಂತ್ರಸ್ತರಿಗೆ ಮನೆ ಶೀಘ್ರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 9:15 IST
Last Updated 13 ಜೂನ್ 2011, 9:15 IST

ಬೀರೂರು: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ  ಆಗಸ್ಟ್ ಒಳಗೆ ಮನೆ ನಿರ್ಮಿಸಿಕೊಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಭಾನುವಾರ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ  ಮಾತನಾಡಿದರು.

ಈಗಾಗಲೇ ಸುಮಾರು 30 ಸಾವಿರ ಮನೆಗಳನ್ನು ಸಂತ್ರಸ್ತರಿಗೆ ವಿತರಿಸಲಾಗಿದ್ದು, ಸೋಮವಾರ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ವಸತಿ ರಹಿತರಿಗೆ 2ಸಾವಿರ ಮನೆಗಳ ವಿತರಣೆಗೆ ಚಾಲನೆ ನೀಡಲಿದ್ದಾರೆ. 450ಎಕರೆ ಪ್ರದೇಶದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ನುಡಿದರು.

2010-11 ಮತ್ತು 2011-12ರ ಸಾಲಿನಲ್ಲಿ ತಲಾ 4 ಲಕ್ಷದಂತೆ ಒಟ್ಟು 8ಲಕ್ಷ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. `ಇಂದಿರಾ~ ಮತ್ತು `ಬಸವ~ ಹೆಸರಿನ ಆಶ್ರಯ ಯೋಜನೆ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿಗಳ ಆಶಯ ಮತ್ತು ಸಂಕಲ್ಪ ವಸತಿ ಹೀನರಿಗೆ ವಸತಿ ಕಲ್ಪಿಸುವುದೇ ಆಗಿದ್ದು ಅನೇಕ ಅಡೆ-ತಡೆಗಳಿಂದ ಇನ್ನೂ ನಾವು ಯೋಜನೆ ಕಾರ್ಯಗತಗೊಳಿಸಲು ಯಶಸ್ವಿಯಾಗಿಲ್ಲ. ಇದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ಬೇಸರ ವ್ಯಕ್ತ ಪಡಿಸಿದರು.

ರಾಜ್ಯದಲ್ಲಿ 13ಸಾವಿರ ಕೋಟಿ ರೂ ವೆಚ್ಚದಲ್ಲಿ ಸುಮಾರು 15 ಸಾವಿರ ಕಿ.ಮೀ. ರಾಜ್ಯ ಮತ್ತು ಗ್ರಾಮೀಣ ಮಟ್ಟದ ರಸ್ತೆಗಳನ್ನು ಸುಧಾರಿಸುವ ಯೋಜನೆ ಜಾರಿಗೆ ಬಂದಿದ್ದು ಶೀಘ್ರವಾಗಿ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು, ಜನಸಾಮಾನ್ಯರಿಗೆ ಒಳ್ಳೆಯದು ಮಾಡಬೇಕೆಂಬ ಇಚ್ಛಾಶಕ್ತಿ ಅಧಿಕಾರಿಗಳಲ್ಲಿ ಬಂದರೆ ಗ್ರಾಮೀಣ ಪ್ರದೇಶಗಳೂ ಅಭಿವೃದ್ಧಿ ಹೊಂದುತ್ತವೆ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ ಕಾರ್ಯ ನಿರ್ವಹಿಸಬೇಕಾದ್ದು ಅಧಿಕಾರಿಗಳ ಹೊಣೆ ಎಂದರು.

ಜೂನ್ 30ರ ಒಳಗಾಗಿ ವಸತಿ ಮತ್ತು ನಿವೇಶನಕ್ಕೆ ಅರ್ಹರ ಪಟ್ಟಿ ತಯಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಕಡೂರು ತಾಲ್ಲೂಕಿನಲ್ಲಿ 6ಸಾವಿರ ನಿವೇಶನ ಹಂಚುವ ಗುರಿ ಹೊಂದಲಾಗಿದೆ. ಇದಕ್ಕೆ ಅಗತ್ಯ ಭೂಮಿ ಯನ್ನು ಎಕರೆಗೆ 10ಲಕ್ಷ ರೂವರೆಗೆ ಬೇಕಾದರೂ ಹಣ ನೀಡಿ ಖರೀದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
 
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಷೆ ಎ.ಇ.ರತ್ನ, ಜಿ.ಪಂ.ಸದಸ್ಯೆ ಮಾಲಿನಿಬಾಯಿ, ತಹಸೀಲ್ದಾರ್ ಬಿ.ಆರ್.ರೂಪ, ತಾ.ಪಂ.ಇಒ ಗಂಗಾಧರಪ್ಪ, ಅಧಿಕಾರಿ ವೆಂಕಟೇಶ್,ಕಡೂರು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್,ತಿಮ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.