ADVERTISEMENT

ಬಡತನ, ಹಸಿವು ಮುಕ್ತ ರಾಜ್ಯ ಕಾಂಗ್ರೆಸ್‌ ಗುರಿ

ಮಂಚೇನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಶಾಸಕ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 8:39 IST
Last Updated 29 ಏಪ್ರಿಲ್ 2018, 8:39 IST

ಚಿಕ್ಕಬಳ್ಳಾಪುರ: ‘ಕರ್ನಾಟಕವನ್ನು ಬಡತನ, ಹಸಿವು ಮುಕ್ತಗೊಳಿಸುವುದು ಕಾಂಗ್ರೆಸ್ ಗುರಿ. ಹೀಗಾಗಿ ದಲಿತ ಹಾಗೂ ಸಂವಿಧಾನ ವಿರೋಧಿ ಭ್ರಷ್ಟ ಬಿಜೆಪಿಗೆ ರಾಜ್ಯದ ಜನ ಈ ಬಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅನ್ನಭಾಗ್ಯ ಯೋಜನೆ ಯಶಸ್ವಿಯಾಗಿದ್ದಕ್ಕೆ ಸಹಿಸಿಕೊಳ್ಳದ ಬಿಜೆಪಿ ಆ ಯೋಜನೆ ಕೇಂದ್ರ ಸರ್ಕಾರದ್ದು ಎಂಬ ಸುಳ್ಳು ಅಪಪ್ರಚಾರ ನಡೆಸುತ್ತಿದೆ. ಬಿಜೆಪಿಯವರು ದಲಿತ ವಿರೋಧಿಗಳು. ಸಂವಿಧಾನ ತಿದ್ದುಪಡಿ ಮಾಡಬೇಕು, ಮೀಸಲಾತಿ ತೆಗೆಯಬೇಕು ಎಂಬ ಮಾತು ಆಡುತ್ತಿದ್ದಾರೆ. ಇಂತಹ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಸರಿಯಾದ ಉತ್ತರ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಬಿಜೆಪಿಯವರು ದಲಿತರ ಮನೆಗೆ ಹೋಗಿ ಹೋಟೆಲ್‌ ತಿಂಡಿ ಸವಿದು ದಲಿತರ ಸ್ನೇಹಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ದಲಿತರ ಮನೆಯಲ್ಲಿ ತಿಂಡಿ ಸೇವಿಸಿದ ಮಾತ್ರಕ್ಕೆ ದಲಿತರು ಅಭಿವೃದ್ಧಿ ಹೊಂದಲ್ಲ. ಅವರ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅನೇಕ ಕಾರ್ಯಕ್ರಮಗಳು ನೀಡಿದಾಗ ಮಾತ್ರ ಸಮಾಜದಲ್ಲಿ ಅವರು ಮುಖ್ಯವಾಹಿನಿಗೆ ಬರುತ್ತಾರೆ. ಅದನ್ನು ಬಿಜೆಪಿಯವರು ಇನ್ನು ಅರ್ಥ ಮಾಡಿಕೊಂಡಿಲ್ಲ’ ಎಂದು ಆರೋಪಿಸಿದರು.

‘ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆ. ಕಳೆದ ಐದು ವರ್ಷದಿಂದ ನಿರೀಕ್ಷೆಗೂ ಮೀರಿ ಕ್ಷೇತ್ರದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಲಾಗಿದೆ. ಇಂದಿರಾ ಗಾಂಧಿ ಅವರಿಗೆ ಇತರೆ ಪಕ್ಷಗಳು ಹಠಾವೊ ಅಂದವು. ಆದರೆ ಇಂದಿರಾ ಗಾಂಧಿ ಬಡತನ ನಿರ್ಮೂಲನೆ ಆಗ ಬೇಕು ಎಂದು ಗರೀಬಿ ಹಠಾವೊ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಹಸಿವು ಮುಕ್ತಗೊಳಿ ಸಲು ಹೊರಟಿದ್ದಾರೆ’ ಎಂದರು.

ಚುನಾವಣಾ ವೀಕ್ಷಕ ತೆಲಂಗಾಣದ ಶ್ರೀಧರ್ ಬಾಬು ಮಾತನಾಡಿ, ‘ಸುಧಾಕರ್ ಅವರು ಒಬ್ಬ ವೈದ್ಯರಾಗಿದ್ದರೆ ಜನರ ಸೇವೆ ಮಾಡಲು ಸಾಧ್ಯವಾಗತ್ತಿರಲಿಲ್ಲ. ಮೊದಲ ಐದು ವರ್ಷದ ಅವಧಿಯಲ್ಲಿ ಅವರು ಜನರ ಪರವಾಗಿ ಕೆಲಸ ಮಾಡಿ ಹಲವು ಯೋಜನೆಗಳನ್ನು ತಂದಿದ್ದಾರೆ. ಕಾಂಗ್ರೆಸ್ ಪಕ್ಷ ಅಂದರೆ ಅದು ಬಡವರ ಪಕ್ಷ’ ಎಂದು ಹೇಳಿದರು.

‘ಪಕ್ಷದ ಕೈ ಗುರುತಿನ ಧ್ಯೆಯವೇ ಬಡವರ ಅಭಿವೃದ್ಧಿ. ಇಂದು ಬಲಹೀನ ವರ್ಗದವರಿಗೆ ಅನುಕೂಲ ಮಾಡಿದರೆ ಮಾತ್ರ ದೇಶಕ್ಕೆ ಶ್ರೇಯಸ್ಸು ಎನ್ನುವುದನ್ನು ಇಂದಿರಾ, ರಾಜೀವ್, ಸೋನಿಯಾ ಹಾಗೂ ಇವತ್ತು ರಾಹುಲ್ ಗಾಂಧಿ ಕೂಡ ನಂಬಿ ಮುಂದುವರಿದಿದ್ದಾರೆ. ಜನಹಿತಕ್ಕಾಗಿ ಕೆಲಸ ಮಾಡುತ್ತಿರುವ ಸುಧಾಕರ್ ಜನರ ಪರವಾಗಿದ್ದಾರೆ. ಯುವಕರು, ವಿದ್ಯಾವಂತರ ನಡುವೆ ಒಬ್ಬರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷೆ ರಾಣಿ ಸತೀಶ್ ಮಾತನಾಡಿ, ‘ಈ ಹಿಂದೆ ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿ ಬಡವರ ಕಲ್ಯಾಣಕ್ಕಾಗಿ ನೀಡಿದ ಕೊಡುಗೆಗಳನ್ನು ಗಮನಿಸಿ ಮತದಾರರು ಕಾಂಗ್ರೆಸ್‌ಗೆ ಮತ ಹಾಕಿ. ಸುಧಾಕರ್ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡಿದ್ದಾರೆ. ಕ್ಷೇತ್ರದ ಅಭಿವೃದ್ದಿಗೆ ಅವರೊಬ್ಬ ಸಮರ್ಥ ವ್ಯಕ್ತಿ ಎಂದು ಕಾಂಗ್ರೆಸ್ ಟಿಕೆಟ್ ನೀಡಿದೆ. ಸುಧಾಕರ್‌ಗೆ ಮತ ಹಾಕಿದರೆ ಜನರ ಯೋಗಕ್ಷೇಮ ನೋಡುವ ಶಕ್ತಿ, ಆಶಯ, ಹಂಬಲ ಅವರಲ್ಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ರಿಯಾಜ್, ಮುಖಂಡರಾದ ನಾಗರಾಜ್, ಅಶ್ವತ್ಥನಾರಾಯಣ, ಸತ್ಯನಾರಾಯಣ, ನಾರಾಯಣಸ್ವಾಮಿ, ಬಾಲಪ್ಪ, ಬಾಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.