ADVERTISEMENT

ಬನಶಂಕರಿ ಉತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 6:04 IST
Last Updated 25 ಜನವರಿ 2016, 6:04 IST
ತರೀಕೆರೆ ಪಟ್ಟಣದಲ್ಲಿ ಬನಶಂಕರಿ ದೇವಿಯ ಬ್ರಹ್ಮ ರಥೋತ್ಸವ  ಭಾನುವಾರ ಸಂಭ್ರಮದಿಂದ ಜರುಗಿತು.
ತರೀಕೆರೆ ಪಟ್ಟಣದಲ್ಲಿ ಬನಶಂಕರಿ ದೇವಿಯ ಬ್ರಹ್ಮ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.   

ತರೀಕೆರೆ: ಪಟ್ಟಣದ ಬನಶಂಕರಿ ದೇವಿಯ ಬ್ರಹ್ಮರಥೋತ್ಸವ ಶ್ರದ್ಧಾಭಕ್ತಿ ಮತ್ತು ಸಂಭ್ರಮಗಳಿಂದ ಭಾನುವಾರ ನೆರವೇರಿತು. ಮುಂಜಾನೆ  ಗಣಪತಿ ಪೂಜೆ, ಗೋ ಪೂಜೆ, ಪುಣ್ಯಾಹ, ನವಗ್ರಹ ಪೂಜೆ ಧ್ವಜಾರೋಹಣದ ಮೂಲಕ ವಾಸ್ತು ರಕ್ಷೋಜ್ಞ ಹೋಮ, ಅಂಕುರಾರ್ಪಣೆ, ಬೇರಿತಾಡನ, ಕಂಕಣ ಬಂಧನ,  ಆದಿ ವಾಸ ಹೋಮ, ಯಾತ್ರಾಹೋಮ, ವರುಣ ಹೋಮ, ರಥಾದಿವಾಸ ಹೋಮ ಕಳಸಾಭಿಷೇಕ, ರಥಶುದ್ಧಿ ನಡೆದವು.

ಹೋಮದ ಪೂರ್ಣಾಹುತಿ ನಡೆದು, ಮೂಲ ದೇವರಿಗೆ ಶ್ರೀ ಸೂಕ್ತ , ಪುರುಷ ಸೂಕ್ತ, ರುದ್ರ–ಚಮೆ, ಪವಮಾನ, ಅಷ್ಟೋತ್ತರ  ಸಹಸ್ರನಾಮಗಳ ಮೂಲಕ ವೇದೋಕ್ತ ಶಾಸ್ತ್ರೋಕ್ತ, ಪುರಾಣೋಕ್ತ, ಕಲ್ಪೋಕ್ತ ಪೂರ್ವಕ  ವೇದ ಮಂತ್ರ ಗಳಿಂದ ಪಂಚಾಮೃತ, ಕ್ಷೀರಾ ಭಿಷೇಕ ನಡೆಸಲಾಯಿತು. ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಅಷ್ಟಾವಧಾನ ಸೇವೆ ನೆರವೇರಿಸಲಾಯಿತು.

ದೇವರಿಗೆ  ವಿವಿಧ ಅಲಂಕಾರಿಕ ವಸ್ತ್ರ ಮತ್ತು ಆಭರಣಗಳಿಂದ ಶೃಂಗರಿಸಿ  ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ರಥಕ್ಕೆ ವಿಶೇಷವಾಗಿ ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳಿಂದ ತಯಾರಿಸಲಾದ ರತ್ನಕಂಬಳಿ ಹಾಗೂ ಹೂವಿನಿಂದ ಅಲಂಕಾರ ಮಾಡಲಾ ಗಿತ್ತು. ರಥಕ್ಕೆ ಕಳಶ  ಮತ್ತು ಧ್ವಜವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಸ್ಥಾಪಿಸಲಾಯಿತು.

ಸಿಂಹದ ಮೇಲೆ ವಿವಿಧ ಆಯುಧಗಳನ್ನು ಹಿಡಿದು ಕುಳಿತಿರುವ ಬನಶಂಕರಿ ದೇವಿಯ ಸುಂದರವಾದ ಉತ್ಸವ ಮೂರ್ತಿಯನ್ನು  ದೇವಸ್ಥಾನದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ದು  ತಾಂತ್ರಿಕರ ಮೂಲಕ ಚರು, ಓಕುಳಿ, ಬೂದುಕುಂಬಳ , ತೆಂಗಿನ ಕಾಯಿಗ ಳಿಂದ ದಿಗ್ಬಲಿ ಹಾಕಲಾಯಿತು. ಮಧ್ಯಾಹ್ನ ದೇವಿಯನ್ನು ರಥದ ಬಳಿ ತರುತ್ತಿ ದ್ದಂತೆಯೇ ಭಕ್ತರು ‘ ಜೈ ಜೈ ಬನಶಂಕರಿ ’ ಎಂಬ ಘೋಷಣೆ ಕೂಗುತ್ತಾ  ರಥಕ್ಕೆ ಬಾಳೆಹಣ್ಣು ಎಸೆತು ಭಕ್ತಿಯ ಪರಾಕಾಷ್ಟೆ ಮೆರೆದರು.

ರಥದ ಧ್ವಜ ಹಾಗೂ ಕಳಶ ಪೂರ್ವಕ ಪ್ರಥಮ ಪೂಜೆಗೆ ಹರಾಜಿನಲ್ಲಿ ಆಯ್ಕೆ ಆಗಿದ್ದ ಟಿ.ಆರ್. ನಾಗರಾಜ್ ಮತ್ತು ಕುಟುಂಬದ ಸದಸ್ಯರು  ಕಳಶ ಹೊತ್ತು ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು. ಶಾಸಕ ಜಿ.ಎಚ್. ಶ್ರೀನಿ ವಾಸ್, ಪುರಸಭೆ ಅಧ್ಯಕ್ಷ ವರ್ಮ ಪ್ರಕಾಶ್, ರಥಕ್ಕೆ ಮತ್ತು ದೇವಿಗೆ ಪೂಜೆ ಸಲ್ಲಿಸಿದ ನಂತರ  ರಥದ ಮುಂಭಾ ಗದಲ್ಲಿ ನಿಲ್ಲಿಸಲಾಗಿದ್ದ ಬೃಹತ್ ಗಾತ್ರದ ಬಾಳೆ ಕಂದನ್ನು ಕಡಿಯುತ್ತಿದ್ದಂತೆ  ಭಕ್ತರು ತಾ ಮುಂದೆ ನಾ ಮುಂದೆ ಎಂಬಂತೆ  ರಥ ಎಳೆದರು.

ದೇವಿಗೆ ಭಕ್ತರು ನೀಡಿದ್ದ ಸೀರೆಗಳ  ಜೊತೆಗೆ  ತೀರ್ಥ–ಪ್ರಸಾದ ದೊಂದಿಗೆ ಅನ್ನಸಂತರ್ಪಣೆ ನಡೆಯಿತು. ಮುಂಜಾ ನೆಯಿಂದಲೇ ಭಕ್ತರು ದೇವಿಯ ದರ್ಶನಕ್ಕಾಗಿ ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಬರುತ್ತಿದ್ದುದು ಕಂಡು ಬಂತು.  ಸಂಜೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮುಂದಿನ ವರ್ಷದ ದೇವಿಯ ರಥೋತ್ಸವದ ಪ್ರಥಮ ಪೂಜೆಗಾಗಿ  ಧ್ವಜ ಮತ್ತು ಕಳಶವನ್ನು ಹರಾಜಿನಲ್ಲಿ ₹1.31 ಲಕ್ಷಕ್ಕೆ  ಪಿ.ಬಿ.ರಾಜಶೇಖರ್ ಪಡೆದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಬನದ ಹುಣ್ಣಿಮೆ: ಬನದ ಹುಣ್ಣಿಮೆ ಪ್ರಯುಕ್ತ ಮನೆ ಮನೆಗಳಲ್ಲಿ  ತಳಿರು ತೋರಣಗಳಿಂದ ಶೃಂಗರಿಸಿ, ಮನೆಯ ಮುಂಭಾಗದಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮುತೈದೆಯರಿಗೆ ಹಾಗೂ ಚಿಕ್ಕ  ಹೆಣ್ಣುಮಕ್ಕಳಿಗೆ ‘ಕೊಡಗು ಮುತ್ತೈದೆ ’ಎಂಬ ಹೆಸರಿನಲ್ಲಿ ಅರಿಶಿನ ಕುಂಕುಮ ಹಾಗೂ ಬಾಗಿನ ನೀಡಿ ಆಶೀರ್ವಾದ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.