ADVERTISEMENT

ಬರದ ಭೀತಿ; ಕೈ ಕೊಡುವ ವಿದ್ಯುತ್

ಜೋಡಿ ತಿಮ್ಮಾಪುರ: ನೀರಿಲ್ಲದೆ ಗ್ರಾಮಸ್ಥರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:40 IST
Last Updated 12 ಡಿಸೆಂಬರ್ 2012, 10:40 IST

ಬೀರೂರು:  ಕಡೂರು ತಾಲ್ಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಮಳೆರಾಯನ ಸುಳಿವೇ ಇಲ್ಲ. ಕೊಳವೆ ಬಾವಿಗಳು ಬತ್ತುತ್ತಿದ್ದರೆ ಕೆರೆಗಳು ಒಣಗಿ ನಿಂತಿವೆ. ಬೀರೂರು ಹೋಬಳಿಯಲ್ಲಿ ಕೂಡಾ ಮಳೆ ಕೊರತೆ ಕಂಡುಬಂದಿದ್ದು ಸುತ್ತಮುತ್ತಲ ಹಳ್ಳಿಗಳ ಕೊಳವೆಬಾವಿಗಳು ಬತ್ತಿವೆ. ಅದರಲ್ಲೂ ತಿಮ್ಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಕುಡಿಯುವ ನೀರಿಗೇ ತತ್ವಾರ ಎದುರಾಗಿದೆ.

ಈ ಕುರಿತು ಗ್ರಾಮಸ್ಥರನ್ನು ಪ್ರಶ್ನಿಸಿದರೆ ಏನು ಮಾಡೋದ್ ಸ್ವಾಮಿ? ಕರೆಂಟ್ ಇದ್ದಾಗ ಬಂದ್ ಕುಡಿಯೋ ನೀರ್ ಹಿಡೀಬೇಕು, ಮಕ್ಳು ಮರೀನೂ ನೀರಿಗೆ ಬರ್ಬೇಕು, ಇಲ್ದಿದ್ರೆ ಕುಡಿಯಕ್ಕೂ ನೀರು ಸಿಕ್ಕಲ್ಲ. ಹೊಲ್ದಾಗೆ ಬೆಳೆ ಬತ್ತಿ ಹೋಗಿದಾವೆ. ಕರೆಂಟ್ ಏನೋ ಸದ್ಯಕ್ಕೆ ಇದ್ರೂ ಬೋರ್‌ವೆಲ್‌ನಾಗೆ ನೀರೇ ಇಲ್ಲ, ನಾವ್ ಮಾಡೋದಾದ್ರೂ ಏನು? ದತ್ತಣ್ಣ ನಾಕು ಕೊಳವೆ ಬಾವಿ ಕೊರೆಸಿದ್ದರು, ಯಾವ್ದರಾಗೂ ನೀರೇ ಬರ್ಲಿಲ್ಲ. ಈಗಲೇ ಮಳೆ ಹೋಗೈತೆ. ಮುಂದಿನ ದಿನ್ದಾಗೆ ಕರೆಂಟ್ ಹೋದ್ರೆ ಪಂಚಾಯ್ತಿ ಮುಂದೆ ನಾವ್ ಕೊಡ ಹಿಡ್ಕಂಡು ಓಡಾಡದೆಯಾ. ಜಮೀನ್‌ಗಳಾಗೇ ಕೊಳವೆಬಾವಿ ಬತ್ತಿದಾವೆ, ಕರೆಂಟ್ ಇದ್ರೂ ಉಪಯೋಗ ಇಲ್ಲ, ರಾಜಕಾರಣಿಗಳು ಅವರ ಬೇಳೆ ಬೇಯಿಸ್ಕಳಾದ್ರಾಗೆ ತಲೆ ಕೆಡಿಸ್ಕಂಡವ್ರೆ, ನಮ್ ಬಗ್ಗೆ ಯೋಚ್ನೆ ಮಾಡಕ್ಕೆ ಅವ್ರಿಗೆ ಎಲೆಕ್ಷನ್‌ನಾಗೇ ಟೇಂ ಸಿಗಾದು ಎನ್ನುತ್ತಾರೆ ಪರಿಸ್ಥಿತಿಯಿಂದ ರೋಸಿ ಹೋಗಿರುವ ಗ್ರಾಮಸ್ಥರು.

ಇನ್ನು ಬೆಳಗ್ಗೆ ಹೊತ್ನಾಗೆ 12ಗಂಟೆಯಿಂದ ಮಧ್ಯೆ ಮಧ್ಯೆ ಕರೆಂಟ್ ತೆಗ್ದು ತ್ರೀಫೇಸ್ ಕರೆಂಟ್ ಏನೋ ಕೊಡ್ತಾರೆ, ಆ ಟೈಮ್ನಾಗೆ ಕುಡಿಯಕ್ಕೆ ನೀರ್ ಹಿಡೀಬೇಕಾ ಅಥ್ವಾ ಹೊಲ್ದಾಗೆ ಬೆಳೆ ಇದ್ರೆ ಅದಕ್ಕೆ ನೀರ್ ಕಟ್ಬೇಕಾ ನೀವೇ ಹೇಳಿ. ಈಗ ಹೊಲ್ದಾಗೆ ಅರ್ಧಮರ್ಧ ರಾಗಿ ಐತೆ, ಕರೆಂಟ್ ಕೈಕೊಟ್ರೆ ನಾವೇ ಕೊಂಡ್‌ಕಬಂದು ತಿನ್ಬೇಕು.ದನಕ್ಕೆ ಮೇವು ಎಲ್ಲಿ ಹೊಂಚಾದು?ಒಟ್ನಗೆ ನಮ್ ಬದುಕೇ ಕಣ್ಣಾಮುಚ್ಚಾಲೆ ಆಗೈತೆ ಎನ್ನುವುದು ಹಳ್ಳಿಗರ ಅಳಲು.

ವಿದ್ಯುತ್ ವಿಷಯವಾಗಿ ಬೀರೂರು ಮೆಸ್ಕಾಂನ ಕಿರಿಯ ಎಂಜಿನಿಯರ್ ಚಂದ್ರಶೇಖರ್ ಅವರನ್ನು ವಿಚಾರಿಸಿದಾಗ , `ಈಗ ಬ್ಯಾಗಡೇಹಳ್ಳಿ ಫೀಡರ್‌ನಿಂದ ಕರೆಂಟ್ ಪೂರೈಕೆ ಆಗುತ್ತಿದೆ. ನಮ್ಮ ಬೇಡಿಕೆ 120 ಮೆಗಾವಾಟ್ ಇದ್ದು, 60ರಿಂದ 80ಮೆಗಾವಾಟ್ ಪೂರೈಕೆ ಆಗುತ್ತೆ. ಅದರಲ್ಲಿ 35ರಿಂದ 60 ಮೆಗಾವಾಟ್‌ನಲ್ಲಿ ಪರಿಸ್ಥಿತಿ ನಿಯಂತ್ರಿಸುವಂತೆ ಒತ್ತಡ ಇರುತ್ತೆ. ಹಳ್ಳಿಗಳಿಗೆ ಹಗಲು 12ರಿಂದ ಸಂಜೆ 6ರರವರೆಗೆ 3ಫೇಸ್ ವಿದ್ಯುತ್ ಕೊಡ್ತಾಇದ್ದೀವಿ.

ಮತ್ತೆ ರಾತ್ರಿ 10ರಿಂದ 2ರವರೆಗೆ 3ಫೇಸ್ ಇರುತ್ತೆ. ಸಂಜೆ 6ರಿಂದ ರಾತ್ರಿ10ಗಂಟೆವರೆಗೆ ಸಿಂಗಲ್‌ಫೇಸ್ ಮತ್ತು ಆರುಗಂಟೆ ಲೋಡ್‌ಶೆಡ್ಡಿಂಗ್ ಇದೆ. ಇದರಲ್ಲಿ ಪಟ್ಟಣಕ್ಕೆ ಯಾವುದೇ ಲೋಡ್‌ಶೆಡ್ಡಿಂಗ್ ಇಲ್ಲ. ಆದರೆ ಹೊರೆ ಹೆಚ್ಚಾದಾಗ ಪಟ್ಟಣದಲ್ಲಿ ಒಂದುಗಂಟೆ ವಿದ್ಯುತ್ ತೆಗೆದು ಪರಿಸ್ಥಿತಿ ಸರಿದೂಗಿಸ್ತೀವಿ. ಇನ್ನು ಸೋರಿಕೆ ತಡೆಗಟ್ಟೊ  ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಂಡು ಬಹುತೇಕ ಅಕ್ರಮ ಸಂಪರ್ಕಗಳನ್ನ ರದ್ದು ಮಾಡಿದ್ದೀವಿ ಎನ್ನುತ್ತಾರೆ.

ಸದ್ಯ ವಿದ್ಯುತ್ ಅಭಾವ ಇರದಿದ್ದರೂ ಮಳೆಕೊರತೆಯಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಕೊರತೆ ಕಾಣಬಹುದಾಗಿದ್ದು ಎಂದು ಇಲಾಖೆ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.