ADVERTISEMENT

ಬಾಳೆಹೊನ್ನೂರು: ಕಾರ್ಮಿಕರಿಗೆ ಇಲಿಜ್ವರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 9:45 IST
Last Updated 10 ಜೂನ್ 2011, 9:45 IST

ಬಾಳೆಹೊಳೆ (ಕಳಸ): ಇಲ್ಲಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟದೂರು ಮತ್ತು ತನೂಡಿ ಗ್ರಾಮಗಳಲ್ಲಿ ಇಲಿಜ್ವರದ ಬಾಧೆಯಿಂದ ತೋಟ ಕಾರ್ಮಿಕರು ಹೈರಾಣಾಗಿದ್ದಾರೆ.
 2 ತಿಂಗಳ ಹಿಂದೆ ತನೂಡಿ ಗ್ರಾಮದ ಕೆಲ ಕಾರ್ಮಿಕರಿಗೆ ತಲೆನೋವು ಮತ್ತು ಜ್ವರ ಕಾಣಿಸಿಕೊಂಡಾಗ ಬಾಳೆಹೊಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡರು.

ಆದರೆ ಆಗಷ್ಟೇ ಭ್ರಷ್ಟಾಚಾರದ ಆರೋಪದ ಮೇಲೆ ಅಲ್ಲಿನ ವೈದ್ಯಾಧಿಕಾರಿ ಬೇರೆಡೆಗೆ ವರ್ಗಾವಣೆಗೊಂಡಿದ್ದರು. ಆದ್ದರಿಂದ ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ. ಪರಿಣಾಮವಾಗಿ ಕಾರ್ಮಿಕರು ದೂರದ ನರಸಿಂಹರಾಜಪುರದ ಆಸ್ಪತ್ರೆಗೆ ದಾಖಲಾದರು.

ಅಲ್ಲಿನ ವೈದ್ಯರಿಗೂ ತನೂಡಿ ಗ್ರಾಮದ ಕಾರ್ಮಿಕರ ದೀರ್ಘ ಕಾಲದ ಜ್ವರದ ಕಾರಣ ಖಚಿತವಾಗಿದ್ದಾಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಿದರು. ಇದುವರೆಗೆ ತನೂಡಿ, ತೋಟದೂರಿನ 25ಕ್ಕೂ ಹೆಚ್ಚು ಕಾರ್ಮಿಕರು ಇಲಿಜ್ವರದ ಬಾಧೆಯಿಂದ ಮಂಗಳೂರು, ಶಿರಸಿಯಲ್ಲಿ ಚಿಕಿತ್ಸೆಗೆ ಪರದಾಡುತ್ತಿದ್ದಾರೆ.

ರೋಗದ ಬಗ್ಗೆ ತಿಳಿದ ಆರೋಗ್ಯ ಇಲಾಖೆ ಒಂದೆರಡು ಬಾರಿ ಗ್ರಾಮದ ಅನೇಕ ಮನೆಗಳಿಗೆ ತೆರಳಿ ತಪಾಸಣೆ ನಡೆಸಿತು.ಅಶುದ್ಧ ನೀರಿನಲ್ಲಿ ಆಶ್ರಯ ಪಡೆಯುವ ಬ್ಯಾಕ್ಟೀರಿಯದಿಂದ ಹರಡುವ ರೋಗವನ್ನು ನಿಯಂತ್ರಿಸಲು ‘ನೀರನ್ನು ಕುದಿಸಿ ಕುಡಿಯಿರಿ’ ಎಂದು ಆರೋಗ್ಯ ಇಲಾಖೆ ತಂಡ ಸಲಹೆ ನೀಡಿತು.

ಈ ನಡುವೆ ತನೂಡಿಯ ಕಳಸೇಗೌಡ ಎಂಬವವರ ಪುತ್ರಿ ಗೀತಾ(27) ಇಲಿಜ್ವರ ಉಲ್ಬಣಿಸಿ ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ತೋಟದೂರಿನ ಕಾರ್ಮಿಕ ಪಾಂಡುನಾಯ್ಕ (45) ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶಿರಸಿಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಆದರೆ ಆರೋಗ್ಯ ಇಲಾಖೆಗೆ ಮಾತ್ರ ಇದಾವುದರ ಬಗ್ಗೆಯೂ ಮಾಹಿತಿಯೇ ಇಲ್ಲ.

‘ಒಂದು ತಿಂಗಳ ಹಿಂದೆ ತನೂಡಿ ಗ್ರಾಮದಲ್ಲಿ ಇಲಿಜ್ವರ ಹಬ್ಬುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ತೆರಳಿ ಸೂಕ್ತ ತಿಳಿವಳಿಕೆ ನೀಡಿದ್ದೇವೆ. ಶುಚಿಯಾದ ನೀರು ಪಡೆಯಲು ಹ್ಯಾಲೋಜೆನ್ ಮಾತ್ರೆಗಳನ್ನೂ ನೀಡಿದ್ದೇವೆ. ಇಲಿಜ್ವರ ಗುಣವಾಗುವ ಖಾಯಿಲೆ. ಬೇಸಿಗೆಯಲ್ಲಿ ಕಂಡುಬಂದರೂ ಮಳೆಗಾಲದಲ್ಲಿ ನಿಯಂತ್ರಣಕ್ಕೆ ಬರುತ್ತದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರಪ್ಪ ತಿಳಿಸಿದ್ದಾರೆ.

‘ಈಗಾಗಲೇ ಒಬ್ಬರು ಸಾವನ್ನಪ್ಪಿದ್ದು, ನಾಲ್ಕೈದು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.  ಚಿಕಿತ್ಸೆ ಪಡೆದು ಮನೆಗೆ ಮರಳಿದವರಿಗೂ ಮತ್ತೆ ಜ್ವರ ಬಾಧಿಸಿದೆ. ಆರೋಗ್ಯ ಇಲಾಖೆ ಮಾತ್ರ ತೆಪ್ಪಗಿದೆ ಎಂದು ’ ಎಂದು ಬಾಳೆಹೊಳೆ ಆಟೊ ಚಾಲಕರ ಸಂಘ ಅಧ್ಯಕ್ಷ ಅಮರ್‌ನಾಥ್ ಪ್ರತಿಕ್ರಿಯಿಸಿದರು.

‘ರೋಗ ಹತೋಟಿಗೆ ಕ್ರಮ ತೆಗೆದುಕೊಳ್ಳುವುದಾಗಿ ಡಾ. ಈಶ್ವರಪ್ಪ ಹೇಳಿದರು.‘ಬಾಳೆಹೊಳೆಯಲ್ಲಿ ಖಾಯಂ ವೈದ್ಯಾಧಿಕಾರಿಯೇ ಇಲ್ಲದೆ ಬಣಕಲ್‌ನ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ಬರಬೇಕಾದ ಮಹಿಳಾ ವೈದ್ಯರೂ ಬಾರದೆ ವಸತಿಗೃಹ ಹಲವು ವರ್ಷಗಳಿಂದ ಪಾಳು ಬಿದ್ದಿದೆ.

ಒಂದು ವಾರದಲ್ಲಿ ಖಾಯಂ ವೈದ್ಯರನ್ನು ನೇಮಕ ಮಾಡಿ ಇಲಿಜ್ವರದ ಹತೋಟಿ ಮಾಡದಿದ್ದಲ್ಲಿ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರವಿ ರೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.