ADVERTISEMENT

`ಬಿಜೆಪಿಯಲ್ಲಿ ಗೊಂದಲ, ಬಂಡಾಯ ಇಲ್ಲ'

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:47 IST
Last Updated 26 ಏಪ್ರಿಲ್ 2013, 9:47 IST

ಚಿಕ್ಕಮಗಳೂರು: ಯಾವುದೇ ವ್ಯಕ್ತಿ ಮತ್ತು ವಿಷಯದ ಪರ ಬಿಜೆಪಿ ಚುನಾವಣೆ ಎದುರಿಸುತ್ತಿಲ್ಲ. ವೈಚಾರಿಕ ಹಿನ್ನೆಲೆಯ ನೆಲೆಗಟ್ಟಿನಲ್ಲಿ ಚುನಾವಣೆ ಎದುರಿ ಸುತ್ತಿದ್ದೇವೆ ಎಂದು ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸತೀಶ್ ತಿಳಿಸಿದರು.

ಬಿಜೆಪಿ ಜಿಲ್ಲಾ ಕಚೇರಿ ಪಾಂಚಜನ್ಯದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ನಿರ್ವಹಣಾ ಸಮಿತಿ ಜಿಲ್ಲಾ ಪ್ರಮುಖರ ಸಭೆಯಲ್ಲಿ ಮಾತನಾಡಿದರು.ಆರಂಭದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ ಎಂದು ಪ್ರಚಾರ ಮಾಡಲಾಗಿತ್ತು. ಈಗ ಆ ಪರಿಸ್ಥಿತಿ ದೂರವಾಗಿ ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಬಿಜೆಪಿಯಲ್ಲಿ ಗೊಂದಲವೂ ಇಲ್ಲ; ಬಂಡಾಯವೂ ಇಲ್ಲ ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಕೆ.ಪ್ರಾಣೇಶ್ ಮಾತನಾಡಿ, ಮತದಾರನ ಮನ ಮುಟ್ಟುವ ಕೆಲಸ ಮಾಡಲಾಗುತ್ತಿದೆ. ಆಯಾ ಬೂತ್‌ನ ಪ್ರಮುಖ ಕಾರ್ಯಕರ್ತರು ಪ್ರತಿ ಮನೆಗೆ ಮತ ಚೀಟಿ ತಲುಪಿಸಲು ಬೂತ್ ಮಟ್ಟದ ಏಜೆಂಟ್‌ಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ನಮ್ಮ ಸಮೀಕ್ಷೆ ಪ್ರಕಾರ ಮಲೆನಾಡು ಭಾಗದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿಗಳಲ್ಲಿ 2ನೇ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿ ನಡೆಸುತ್ತಿವೆ. ಬಿಜೆಪಿಗೆ ಅಗ್ರಸ್ಥಾನ ಖಚಿತ. ಬಯಲು ಭಾಗದ ಕಡೂರು, ತರಿಕೆರೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ.

ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹಿಂದಿನ ಚುನಾವಣೆಯ ಫಲಿತಾಂಶ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ಮುಖಂಡರಾದ ಸಿ.ಆರ್.ಪ್ರೇಂಕುಮಾರ್, ವರಸಿದ್ದಿ ವೇಣುಗೋಪಾಲ್,ಸೀತಾರಾಂ ಭರಣ್ಯ, ಕೆಂಜಿಗೆ ಕೇಶವ, ರತನ್, ಪರಿಕ್ಷೀತ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT