ADVERTISEMENT

ಬಿಳಿಕಾಂಡ ಕೊರಕ ನಿಯಂತ್ರಿಸದಿದ್ದರೆ ಅರೇಬಿಕಾ ನಾಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 9:00 IST
Last Updated 5 ಅಕ್ಟೋಬರ್ 2012, 9:00 IST

ಕೆಪಿಎ ನೂತನ ಅಧ್ಯಕ್ಷ ನಿಶಾಂತ್ ಆರ್.ಗುರ್ಜರ್ ಆತಂಕ
ಚಿಕ್ಕಮಗಳೂರು:
ಬಿಳಿಕಾಂಡ ಕೊರಕ ಹುಳು ಬಾಧೆ ನಿಯಂತ್ರಿಸದಿದ್ದರೆ ಮುಂದಿನ  ದಶಕದಲ್ಲಿ ಅರೇಬಿಕಾ ಕಾಫಿ ತೋಟಗಳು ಸಂಪೂರ್ಣ ನಾಶವಾಗುವ ಅಪಾಯವಿದೆ. ಕಾಫಿ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ 5ನೇ ಸ್ಥಾನದಲ್ಲಿದ್ದ ನಮ್ಮ ರಾಷ್ಟ್ರ 7ನೇ ಸ್ಥಾನಕ್ಕೆ ಕುಸಿದಿದೆ ಎಂದು ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್(ಕೆಪಿಎ) ನೂತನ ಅಧ್ಯಕ್ಷ ನಿಶಾಂತ್ ಆರ್.ಗುರ್ಜರ್ ಎಚ್ಚರಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಮ್ಮ ದೇಶದ ಕಾಫಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಅರೇಬಿಕಾ  ಮಲೆಬಾರಿಕಾ, ಮೈಸೂರು ನಗೆಟ್ಸ್ ವಿಶ್ವ ಮಾನ್ಯತೆ ಪಡೆದಿವೆ. ಅರೇಬಿಕಾ ಕಾಫಿ ಬೆಳೆ ಪ್ರಮಾಣ ಹಿಂದೆ ಶೇ.70ರಷ್ಟಿದ್ದರೆ, ರೊಬಸ್ಟಾ ಕಾಫಿ ಶೇ.30ರಷ್ಟಿತ್ತು. ಆದರೆ ಇಂದು ಈ ಪರಿಸ್ಥಿತಿ ತಿರುವು ಮುರು ವಾಗು ತ್ತಿದ್ದು, ಬಿಳಿ ಕಾಂಡಕೊರಕ ಬಾಧೆಯಿಂದಾಗಿ ಅರೇಬಿಕಾ ತೋಟಗಳನ್ನು ರೊಬಸ್ಟಾ ಕಾಫಿತೋಟಗಳಾಗಿ ಪರಿವರ್ತಿಸುವ ಅಪಾಯ ಎದುರಾಗಿದೆ ಎಂದರು.

ಅರೇಬಿಕಾ ಉಳಿಸಲು ಕೇಂದ್ರ ಸರ್ಕಾರ ಸೇರಿದಂತೆ ಕಾಫಿ ಮಂಡಳಿ ಸಹ ಚಿಂತಿಸಬೇಕು. ಅರೇಬಿಕಾ ಉತ್ಪಾದನೆ ಕುಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ತನ್ನ ಮಹತ್ವ ಕಳೆದುಕೊಳ್ಳುವ ಸಂಭವವಿದೆ. ಸಂಸದೀಯ ಮಂಡಳಿ ನಿಯೋಗ ಕಾಫಿ ತೋಟಗಳಿಗೆ ಭೇಟಿ ನೀಡಿದಾಗ ಎಲ್ಲ ವಿವರ ಒದಗಿಸಲಾಗಿದೆ. ಹಲವು ಸಲಹೆಗಳನ್ನು ಆ ಮಂಡಳಿ ತನ್ನ ವರದಿಗೆ ಸೇರಿಸಿದೆ. ಕೇಂದ್ರ ಸರ್ಕಾರ 12ನೇ ಹಣಕಾಸು ಯೋಜನೆಯಲ್ಲಿ ಇದಕ್ಕೆ ಪೂರಕವಾಗಿ ಬೆಳೆಗಾರರಿಗೆ ಸೌಲಭ್ಯ ವಿಸ್ತರಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.

ಕಾರ್ಮಿಕರ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಯಾಂತ್ರೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಇದಕ್ಕೆ ಪೂರಕವಾಗಿ ಕಾಫಿ ಮಂಡಳಿ ಯಂತ್ರೋಪಕರಣ ಖರೀದಿಗೆ ಸಹಾಯಧನ ನೀಡಲು ಮುಂದಾಗಿದೆ. ಜನರೇಟರ್, ಹಸಿರು ಕಾಫಿ ಬೀಜ ಪ್ರತ್ಯೇಕಗೊಳಿಸುವ ಯಂತ್ರಕ್ಕೂ ಸಹಾಯಧನ ವಿಸ್ತರಿಸಬೇಕಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂದಿನ 5 ವರ್ಷಗಳವರೆಗೆ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಗೆ ಅನ್ವಯವಾಗುವಂತೆ ಕ್ರಿಯಾ ಯೋಜನೆಯನ್ನು ವಾಣಿಜ್ಯ ಸಚಿವಾಲಯ ತಯಾರಿಸಬೇಕು. ಹೆಚ್ಚು ಕಾಫಿ ಬೆಳೆಯುವ ತಳಿಗಳನ್ನು ಬಹುಮುಖ್ಯವಾಗಿ ಎಲೆಚುಕ್ಕಿ ರೋಗ ಮತ್ತು ಬಿಳಿಕಾಂಡಕೊರಕ ನಿರೋಧಕ ಶಕ್ತಿ ಹೊಂದಿರುವಂತೆ ಅಭಿವೃದ್ಧಿಗೊಳಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಹನಿ ನೀರಾವರಿ ಮತ್ತು  ತುಂತುರು ನೀರಾವರಿಗೆ ಕೇಂದ್ರ ಸರ್ಕಾರ ಈಗ ಕೇವಲ 20 ಹೆಕ್ಟೇರ್ ಒಳಗಿರುವ ಕಾಫಿ ತೋಟಗಳಿಗೆ ಮಾತ್ರ  ಸಹಾಯಧನ ವಿಸ್ತರಿಸಿದೆ. ಆದರೆ ಇದನ್ನು ಎಲ್ಲ ಬೆಳೆಗಾರರಿಗೂ ನೀಡಬೇಕು.  ಪಲ್ಪರ್ ಹಾಗೂ ಕಾಫಿ ತೊಳೆಯುವ ಯಂತ್ರಗಳ ಖರೀದಿಗೆ ನೀಡುತ್ತಿರುವ ಸಹಾಯಧನವನ್ನು ಎಲ್ಲ ಬೆಳೆಗಾರರಿಗೂ ನೀಡಬೇಕೆಂಬುದು ಕೆಪಿಎ ಒತ್ತಾಯ.

ಕಾಫಿ ಗಿಡ ಮರು ನಾಟಿಗೂ ಸಹಾಯಧನದ ಮಿತಿಯನ್ನು ಕಾರ್ಪೊರೇಟ್ ಮತ್ತು ಸಹಕಾರಿ ವ್ಯವಸ್ಥೆಯ ಕಾಫಿ ತೋಟಗಳಿಗೂ ವಿಸ್ತರಿಸಬೇಕು. ಎರೆಗೊಬ್ಬರ ತಯಾರಿಕೆಗೆ 12ನೇ ಹಣಕಾಸು ಯೋಜನೆಯಡಿ `ಹಸಿರು ತಂತ್ರಜ್ಞಾನ~ಕ್ಕೆ ಉತ್ತೇಜನ ನೀಡಲು ಸಣ್ಣ ಬೆಳೆಗಾರರಿಗೆ  ಶೇ.50 ಹಾಗೂ ಉಳಿದ ಬೆಳೆಗಾರರಿಗೆ ಶೇ.40 ಸಹಾಯಧನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಎ ನೂತನ ಉಪಾಧ್ಯಕ್ಷ ಗೋವಿಂದಪ್ಪ ಜಯರಾಮ್, ನಿಕಟಪೂರ್ವ ಅಧ್ಯಕ್ಷ ಮಾರ್ವಿನ್ ರಾಡ್ರಿಗಸ್, ಕಾರ್ಯದರ್ಶಿ ಅನಿಲ್ ಸವೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.