ADVERTISEMENT

ಬೆಳೆಗಾರರ ಮಾನ ಉಳಿಸಿದ ಅಡಿಕೆ...!

ರವಿ ಕೆಳಂಗಡಿ
Published 10 ಡಿಸೆಂಬರ್ 2017, 9:13 IST
Last Updated 10 ಡಿಸೆಂಬರ್ 2017, 9:13 IST
ಕಳಸ ಸಮೀಪದ ಅಡಿಕೆ ತೋಟದಲ್ಲಿ ಕಟಾವು ಮಾಡಿದ ಅಡಿಕೆ ಗೊನೆಗಳನ್ನು ಸಂಸ್ಕರಣೆಗೆ ಕೊಂಡೊಯ್ಯುತ್ತಿರುವುದು.
ಕಳಸ ಸಮೀಪದ ಅಡಿಕೆ ತೋಟದಲ್ಲಿ ಕಟಾವು ಮಾಡಿದ ಅಡಿಕೆ ಗೊನೆಗಳನ್ನು ಸಂಸ್ಕರಣೆಗೆ ಕೊಂಡೊಯ್ಯುತ್ತಿರುವುದು.   

ಕಳಸ ಹೋಬಳಿಯಲ್ಲೀಗ ಅಡಿಕೆ ಕೊಯ್ಲಿನ ಭರಾಟೆ. ತೋಟದಲ್ಲಿ ಕೊನೆ ತೆಗೆಯುವುದು, ಮನೆ ಸಮೀಪದಲ್ಲಿ ಅಡಿಕೆ ಸುಲಿಯುವುದು, ಬೇಯಿಸುವುದು ಮತ್ತು ಒಣಗಿಸುವ ಕೆಲಸದಲ್ಲಿ ಬೆಳೆಗಾರರು ಮತ್ತು ಕಾರ್ಮಿಕರು ತಲ್ಲೀನರಾಗಿದ್ದಾರೆ.

ಇದು ಪ್ರತಿ ವರ್ಷದ ವಿದ್ಯಮಾನವೇ ಆಗಿರುವುದರಿಂದ ಇದರಲ್ಲಿ ವಿಶೇಷ ಏನು ಎಂಬ ಪ್ರಶ್ನೆ ಸಹಜ. ಆದರೆ ಹಲವು ವರ್ಷಗಳ ವಿದ್ಯಮಾನ ಗಮನಿಸಿದರೆ ಈ ಬಾರಿ ಅಡಿಕೆ ಬೆಳೆಯು ಬೆಳೆಗಾರರ ಮಾನ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕಾರಣವಿಷ್ಟೆ, ಜಾಗತಿಕ ಕಾಫಿ ಉತ್ಪಾದನೆಯ ಹೆಚ್ಚಳದ ಕಾರಣಕ್ಕೆ ಕಾಫಿ ಬೆಲೆ ನೆಲ ಕಚ್ಚಿದೆ. 50 ಕೆ.ಜಿ. ತೂಕದ ರೊಬಸ್ಟಾ ಚೆರ್ರಿ ಮತ್ತು ಅರೇಬಿಕಾ ಚೆರ್ರಿ ಕ್ರಮವಾಗಿ ₹2,900 ಮತ್ತು 3,700 ಕನಿಷ್ಠ ಧಾರಣೆ ಪಡೆದಿವೆ. 2 ವರ್ಷದಲ್ಲೇ ಕಾಫಿಗೆ ಇದು ಅತ್ಯಂತ ಕನಿಷ್ಠ ಧಾರಣೆ.

ಅತ್ತ ಕಪ್ಪು ಬಂಗಾರವೆಂದೇ ಹೆಸರಾಗಿರುವ ಕಾಳುಮೆಣಸು ಧಾರಣೆ ಕೂಡ ಕೆ.ಜಿ.ಗೆ ₹380–390 ಆಸುಪಾಸಿನಲ್ಲೇ ಸ್ಥಗಿತವಾಗಿದೆ. ವಿಯೆಟ್ನಾಂ ಕಾಳುಮೆಣಸಿನ ಆಮದಿನ ಕಾರಣಕ್ಕೆ ಮೆಣಸಿನ ಬೆಲೆಯೂ ಪಾತಾಳಕ್ಕೆ ಮುಟ್ಟಿದೆ. ಮೆಣಸಿನ ಆಮದು ಬೆಲೆಯನ್ನು ಕಿಲೋಗೆ ₹500ಗೆ ಈ ವಾರವಷ್ಟೇ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಆದರೂ ಧಾರಣೆ ಏರಲು ಕೆಲ ದಿನಗಳೇ ಬೇಕಾಗಬಹುದು.

ADVERTISEMENT

ಈ ಹಿನ್ನೆಲೆಯಲ್ಲಿ ಕಾಫಿ, ಮೆಣಸಿನ ತೋಟದಲ್ಲಿ ಈ ವರ್ಷ ಕಾಂಚಾಣದ ಕನಸು ಬೆಳೆಗಾರರಿಗೆ ಇಲ್ಲವಾಗಿದೆ. ಏರುತ್ತಿರುವ ನಿರ್ವಹಣಾ ವೆಚ್ಚ ಕೂಡ ಲಾಭದ ಆಸೆಗೆ ತಣ್ಣೀರು ಎರಚುತ್ತಿದೆ.

ಇಂತಹ ಸಂಕಷ್ಟದ ಕಾಲದಲ್ಲಿ ಬೆಳೆಗಾರರ ಕೈ ಹಿಡಿಯುತ್ತಿರುವುದು ಅಡಿಕೆ. ಕ್ವಿಂಟಲ್‌ ಒಂದಕ್ಕೆ ರಾಶಿ ಇಡಿ ₹37,500 ಬೆಲೆ ಇದ್ದರೆ ಬೆಟ್ಟೆ ಅಡಿಕೆ ಧಾರಣೆ ₹39,000 ಆಗಿದೆ. ಇದು ಅಡಿಕೆಯ ಮಟ್ಟಿಗೆ ಉತ್ತಮ ಧಾರಣೆಯೇ ಆಗಿದೆ ಎಂಬುದು ಬೆಳೆಗಾರರ ಅಭಿಪ್ರಾಯ. ಆದರೂ ಜನವರಿ ಕಳೆದರೆ ಅಡಿಕೆ ಬೆಲೆ ಗಗನಕ್ಕೆ ಏರುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಹುತೇಕ ಬೆಳೆಗಾರರು ಅಡಿಕೆ ಮಾರದೆ ಉಳಿಸಿಕೊಂಡಿದ್ದಾರೆ.

ಮಲೆನಾಡಿನ ಮಡಿಲಾದ ಕಳಸ ಹೋಬಳಿ ಯಲ್ಲಿ ಅಡಿಕೆ, ಕಾಫಿ ಮತ್ತು ಕಾಳುಮೆಣಸು ಈ ಮೂರೂ ಬೆಳೆಗಳು ಉತ್ತಮ ಇಳುವರಿ ನೀಡುತ್ತವೆ. ಆದರೆ ಮೂಡಿಗೆರೆ ಭಾಗದಲ್ಲಿ ಅಡಿಕೆ ಇಳುವರಿ ಕಡಿಮೆ. ಆದ್ದರಿಂದ ಕಾಫಿ, ಕಾಳುಮೆಣಸಿನ ಧಾರಣೆ ಕುಸಿದರೂ ಕಳಸ ಹೋಬಳಿಯ ಬೆಳೆಗಾರರನ್ನು ಅಡಿಕೆಯು ಕೈಬಿಡದೆ ಅವರ ಮಾನ ಕಾಯುತ್ತಿದೆ.

ಎರಡು ವರ್ಷದ ಸತತ ಮಳೆ ಕೊರತೆ ಕಾರಣಕ್ಕೆ ಬಯಲು ಸೀಮೆಯಲ್ಲಿ ಅಡಿಕೆ ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 4–5 ವರ್ಷ ಅಡಿಕೆ ಬೆಲೆ ಇಳಿಯದು ಎಂಬ ಭಾವನೆ ಇದೆ.ಆದ್ದರಿಂದಲೇ ಅಡಿಕೆ ಬೆಳೆಯ ಬಗ್ಗೆ ಬೆಳೆಗಾರರು. ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಬಹುತೇಕ ಬೆಳೆಗಾರರು ಅಡಿಕೆ ಸಂಸ್ಕರಣೆ ಮನೆಯಲ್ಲೇ ಮಾಡುತ್ತಿದ್ದು ಏರಬಹುದಾದ ಬೆಲೆಯ ನಿರೀಕ್ಷೆಯಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.