ADVERTISEMENT

`ಭೂಕಬಳಿಕೆ ನಿಷೇಧ ಕಾಯ್ದೆ ರದ್ಧತಿಗೆ ಬದ್ಧ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:45 IST
Last Updated 6 ಡಿಸೆಂಬರ್ 2012, 6:45 IST

ನರಸಿಂಹರಾಜಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭೂಕಬಳಿಕೆ ಕಾಯ್ದೆ ರದ್ದು ಪಡಿಸಿ ಬಡವರ್ಗದ ಒತ್ತುವರಿದಾರರನ್ನು ರಕ್ಷಿಸಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ತಿಳಿಸಿದರು.

ತಾಲ್ಲೂಕು ಕಾಂಗ್ರೆಸ್ ಘಟಕದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಲೆನಾಡಿನ ರೈತರ ಬದುಕಿಗೆ ಮಾರಾಟವಾಗಿರುವ ಭೂಕಬಳಿಕೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಡವರು, ನಿರ್ಗತಿಕರು ಒತ್ತುವರಿ ಮಾಡಿಕೊಂಡಿರುವ ಹಾಗೂ ಯಾವುದೇ ರೀತಿ ಒತ್ತುವರಿ ಮಾಡಿಕೊಂಡಿರುವವರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ವಿಚಾರವನ್ನು ಸೇರಿಸಲು ತೀರ್ಮಾನಿಸಲಾಗಿದೆ ಎಂದರು.

ಜೆಡಿಎಸ್ ಹಾಗೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ  ಕರ್ನಾಟಕ ಭೂಕಂದಾಯ ಕಾಯಿದೆ 1964ಕ್ಕೆ ತಿದ್ದುಪಡಿ ತಂದಿರುವುದರಿಂದ ಯಾವುದೇ ವ್ಯಕ್ತಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪ್ರವೇಶಿಸುವುದು ಮತ್ತು ಸಾಗುವಳಿ ಮಾಡುವುದು ಅಪರಾಧವಾಗುತ್ತದೆ ಎಂದು ದೂರಿದರು.

ಅನುಭವವಿಲ್ಲದವರು ಆಡಳಿತ ನಡೆಸಿದರೆ ಜನಸಾಮಾನ್ಯರ ಬದುಕಿಗೆ ಮಾರಕವಾಗುತ್ತದೆ ಎಂಬುದಕ್ಕೆ ಈ ಕಾಯ್ದೆ ಜಾರಿಗೊಳಿಸಿರುವುದೇ ಸಾಕ್ಷಿಯಾಗಿದೆ.1947ರ ನಂತರ ಕಂದಾಯ ಭೂಮಿ ಎಷ್ಟು,ಅರಣ್ಯ ಭೂಮಿ ಎಷ್ಟು ಎಂಬುದರ ಬಗ್ಗೆ ಸಮಿಕ್ಷೆ ನಡೆದಿಲ್ಲ. ಇದರ ಸಮಿಕ್ಷೆಯಾದಾಗ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸರ್ಕಾರ ಜಾರಿಗೊಳಿಸಲು ಹೊರಟಿರುವ ಭೂಕಬಳಿಕೆ ನಿಷೇಧ ಕಾಯಿದೆ ಅನುಷ್ಠಾನವಾದಲ್ಲಿ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣರೈತರನ್ನು ಒಕ್ಕಲೆಬ್ಬಿಸುವ ಮೂಲಕ ಬಿಜೆಪಿ ಸರ್ಕಾರ ಈ ಭಾಗದಲ್ಲಿ ನಕ್ಸಲ್ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಕಾಂಗ್ರೆಸ್ ಸಂಪೂರ್ಣ ಬಹುಮತ ನೀಡಿದರೆ ಭೂ ಕಬಳಿಕೆ ನಿಷೇಧ ಕಾಯಿದೆಯನ್ನು ರದ್ದುಪಡಿಸಲಾಗುವುದು. ಬ್ರಿಟಿಷರ ಆಡಳಿತಕ್ಕೂ, ಬಿಜೆಪಿ ಆಡಳಿತಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಬ್ರಿಟಿಷರು ಭಾರತದ ಸಂಪತ್ತು ಲೂಟಿಮಾಡಿದರು. ಜಿಲ್ಲೆಯ ಕೆಲವು ಆಡಳಿತ ಪಕ್ಷದ ಶಾಸಕರು ಭ್ರಷ್ಟಾಚಾರದ ಮೂಲಕ ಹಣ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ್‌ಹೆಗ್ಡೆ ಮಾತನಾಡಿ, ಹುಲಿ ಯೋಜನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ರಾಜಕೀಯವಾಗಿ ಹೇಳಿಕೆ ಕೊಡುವುದನ್ನು ಬಿಟ್ಟು, ಯೋಜನೆ ರದ್ದು ಪಡಿಸುವಂತೆ ಉಭಯ ಸದನಗಳಲ್ಲಿ ತೀರ್ಮಾನ ತೆಗೆದುಕೊಂಡು ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕಳುಹಿಸಲಿ ಎಂದರು.

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಟಿ.ಡಿ. ರಾಜೇಗೌಡ, ಬಿ.ಸಿ.ಗೀತಾ, ವನಮಾಲಮ್ಮ, ಮಹಮ್ಮದ್ ಇಫ್ತಿಕಾರ್‌ಆದಿಲ್, ಸದಾಶಿವ, ಎಚ್.ಜಿ.ವೆಂಕಟೇಶ್, ಸಚ್ಚಿನ್ ಮೀಗಾ, ಸೇವಿಯಾರ್, ಅಬೂಬಕ್ಕರ್, ಸುಬ್ರಹ್ಮಣ್ಯ ಮತ್ತಿತರು ಇದ್ದರು.

ಪ್ರತಿಭಟನೆಯ ಅಂಗವಾಗಿ ಪಟ್ಟಣದ ಹಳೆಪೇಟೆಯಿಂದ ಮಿನಿ ವಿಧಾನ ಸೌಧದವರೆಗೆ ಮೆರವಣಿಗೆ ನಡೆಸಲಾಯಿತು. ಸಭೆಯ ನಂತರ ರಾಜ್ಯಪಾಲರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.