ADVERTISEMENT

‘ಮತದಾನ ಮಾಡಲು ನಿರ್ಲಕ್ಷ್ಯ ಬೇಡ’

ಮತದಾನದ ಜಾಗೃತಿ: ಜಿಲ್ಲಾ ಪಂಚಾಯಿತಿ ಸಿಇಒ ಸಿ.ಸತ್ಯಭಾಮಾ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 7:18 IST
Last Updated 9 ಏಪ್ರಿಲ್ 2018, 7:18 IST

ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡುವುದು ಎಲ್ಲರ ಕರ್ತವ್ಯ ವಾಗಿದ್ದು, ಮತದಾನ ಮಾಡಲು ನಿರ್ಲಕ್ಷ್ಯ ಬೇಡ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ ಸಲಹೆ ನೀಡಿದರು.

ಚುನಾವಣಾ ಆಯೋಗ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ನೇತಾಜಿ ಸುಭಾಶ್ ‌ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಮತದಾನದ ಜಾಗೃತಿ ಮತ್ತು ಮತಯಂತ್ರ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗುಣಮಟ್ಟದ ಆಡಳಿತ ವ್ಯವಸ್ಥೆ ಯಿಂದ ದೇಶ ಅಭಿವೃದ್ಧಿಯಾಗಲಿದ್ದು, ಈ ನಿಟ್ಟಿನಲ್ಲಿ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡುವುದು ಎಲ್ಲರ ಜವಾಬ್ದಾರಿ. ಮತದಾರರು ಆಮಿಷಗಳಿಗೆ ಬಲಿಯಾಗಬಾರದು. ಒತ್ತಡಕ್ಕೆ ಮಣಿಯಬಾರದು’ ಎಂದರು.

ADVERTISEMENT

‘ಮತದಾನ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಅದನ್ನು ಜಾಗರೂಕತೆಯಿಂದ ನಿರ್ವಹಿಸಬೇಕು. 18 ವರ್ಷ ತುಂಬಿದ ಯುವಕ, ಯುವತಿಯರು ಮತಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಾಯಿಸಿಕೊಳ್ಳಲು ಇದೇ 14ರವರೆಗೆ ಅವಕಾಶವಿದ್ದು, ಸಮೀಪದ ಬೂತ್ ಮಟ್ಟದ ಅಧಿಕಾರಿ ಸಂಪರ್ಕಿಸಿ ಅಗತ್ಯ ದಾಖಲೆ ನೀಡಿ ನೋಂದಾಯಿಸಿಕೊಳ್ಳಬೇಕು’ ಎಂದರು.

‘ಈ ಬಾರಿ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಜತೆಗೆ ವಿವಿ ಪ್ಯಾಟ್ ಯಂತ್ರ ಅಳವಡಿಸಲಿದ್ದು, ಮತ ಚಲಾಯಿಸಿದಾಗ ವಿವಿಪ್ಯಾಟ್ ಯಂತ್ರದಲ್ಲಿ ಅಭ್ಯರ್ಥಿ ಚಿಹ್ನೆ ಮತ್ತು ಹೆಸರು ಮುದ್ರಿತ ಚೀಟಿಯಲ್ಲಿ ಏಳು ಸೆಕೆಂಡ್‌ ಪ್ರದರ್ಶನಗೊಳ್ಳುತ್ತದೆ. ಅದರಿಂದ ಯಾರಿಗೆ ಮತದಾನ ಮಾಡಲಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು’ ಎಂದರು.

ವಾಯು ವಿಹಾರಕ್ಕೆ ಬಂದಿದ್ದ ಸಾರ್ವಜನಿಕರು ಅಣುಕು ಮತದಾನ ಮಾಡಿದರು. ವಿವಿ ಪ್ಯಾಟ್ ಯಂತ್ರದ ಬಗೆಗಿನ ಗೊಂದಲ ನಿವಾರಿಸಿಕೊಂಡರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವಿಠ್ಠಲ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.