ಮೂಡಿಗೆರೆ: ಇದೇ 16 ರವರೆಗೆ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಹೆಸರು ಸೇರ್ಪಡೆ ಮತ್ತು ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದ್ದು, ಮತದಾರರು ತಮ್ಮ ವಾಸಸ್ಥಳ ದೃಢೀಕರಣ ಮತ್ತು ವಯಸ್ಸಿನ ದೃಢೀಕರಣ ಪತ್ರಗಳೊಂದಿಗೆ ತಮ್ಮ ಮತಗಟ್ಟೆಗಳಿಗೆ ತೆರಳಿ ಸೇರ್ಪಡೆ ಮತ್ತು ಬದಲಾವಣೆಗೊಳಿಸಿಕೊಳ್ಳಲು ಅವಕಾಶವಿದೆ ಎಂದು ಚುನಾವಣಾ ತಾಲ್ಲೂಕು ನೋಡಲ್ ಅಧಿಕಾರಿ ರಾಜಪ್ಪ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಮತದಾರರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸುವಂತೆ ನಡೆದ ಮೊದಲನೇ ಹಂತದ ಜಾಗೃತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಜನವರಿ 1 ಕ್ಕೆ 18 ವರ್ಷ ತುಂಬಿದವರು ಮತದಾನಕ್ಕೆ ಅರ್ಹರಾಗಿದ್ದು, ತಮ್ಮ ಹಕ್ಕು ಚಲಾವಣೆಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸ ಬೇಕಾಗಿರುವುದು ಅವಶ್ಯಕವಾಗಿದೆ. ಈಗಾಗಲೇ ಗುರುತಿನ ಚೀಟಿ ಹೊಂದಿರುವ ಮತದಾರರು ಸಹ, ಪಟ್ಟಯಲ್ಲಿ ತಮ್ಮ ಹೆಸರು ಇದೇಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಮತ್ತು ಪಟ್ಟಿಯಲ್ಲಿ ಹೆಸರಿಲ್ಲದೇ ಇರುವವರು ಕೂಡಲೇ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಅಗತ್ಯ ದಾಖಲೆ ನೀಡಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಶಿವರಂಗಪ್ಪ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಯಾರೊಬ್ಬರೂ ಈ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸಮಾಜದ ಶಿಕ್ಷಿತರ ಜವಾಬ್ದಾರಿಯಾಗಿದೆ. ಪ್ರತಿ ಹಳ್ಳಿಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವಂತೆ ನಾವೆಲ್ಲರೂ ಕಾರ್ಯನಿರ್ವಹಿಸೋಣ ಎಂದರು. ತಾಲ್ಲೂಕಿನಲ್ಲಿ ಚುನಾವಣೆಗೆ ಸಂಬಂದಿಸಿದ ದೂರು ಸ್ವೀಕಾರಕ್ಕಾಗಿ ಟೋಲ್‌ಫ್ರೀ ದೂರವಾಣಿ ಸ್ಥಾಪಿಸಲಾಗಿದ್ದು, 08263–220155 ಗೆ ಕರೆ ಮಾಡುವಂತೆ ತಿಳಿಸಿದರು.
ಜಾಥಾದಲ್ಲಿ ಡಿ.ಎಸ್.ಬಿಳೀಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಶಾಸಕರ ಮಾದರಿ ಶಾಲಾ ವಿದ್ಯಾರ್ಥಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಭಾಗವಹಿಸಿ ಪ್ರತಿಯೊಬ್ಬರೂ ಮತದಾನದಲ್ಲಿ ಹಕ್ಕನ್ನು ಚಲಾಯಿಸುವಂತೆ ಘೋಷಣೆಗಳನ್ನು ಕೂಗಿದರು. ಲಯನ್ಸ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಾದ ಚಂದ್ರಮೌಳಿ, ಕೃಷ್ಣಪ್ಪ, ರವೀಂದ್ರ, ರುದ್ರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.