ADVERTISEMENT

ಮರ್ಲೆಯಲ್ಲಿ ಕಾನೂನುಬಾಹಿರ ಜಲ್ಲಿ ಕ್ರಷರ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 5:10 IST
Last Updated 20 ಅಕ್ಟೋಬರ್ 2012, 5:10 IST

ಚಿಕ್ಕಮಗಳೂರು: ತಾಲ್ಲೂಕಿನ ಮರ್ಲೆ ಗ್ರಾಮದಲ್ಲಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಜಲ್ಲಿ ಕ್ರಷರ್ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜೆಡಿಎಸ್, ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ಮುಖಂಡರು ಇಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಅಕ್ರಮವಾಗಿ ನಡೆಯುತ್ತಿರುವ ಜಲ್ಲಿ ಕ್ರಷರ್ ಪರವಾನಗಿ ರದ್ದುಪಡಿಸಿ, 15 ದಿನದೊಳಗೆ ಬಾಗಿಲು ಮುಚ್ಚಿಸದಿದ್ದರೆ ಬಿಜೆಪಿ ಹೊರತುಪಡಿಸಿ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಕಾನೂನು ಹೋರಾಟ ನಡೆಸುವ ಜತೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಸರ್ವಪಕ್ಷಗಳ ಮುಖಂಡರು ಎಚ್ಚರಿಕೆ ನೀಡಿದರು.

ಜಲ್ಲಿ ಕ್ರಷರ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಕ್ರಷರ್ ಕಾರ್ಯನಿರ್ವಹಿಸುತ್ತಿರುವುದು ಅರಣ್ಯ ಪ್ರದೇಶದಲ್ಲಿ. ಈಗ ಅದನ್ನು ಗೋಮಾಳಕ್ಕೆ ಸೇರಿಸಲಾಗಿದೆ. ಅರಣ್ಯದಲ್ಲಿ ಕ್ರಷರ್ ನಡೆಸಲು ಅವಕಾಶ ಇಲ್ಲದಿದ್ದರೂ ಅಲ್ಲಿ ಕ್ರಷರ್ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಸ್.ಎಲ್.ಬೋಜೇಗೌಡ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಎಲ್.ಮೂರ್ತಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಸುರಕ್ಷಿತ ವಲಯ ಗುರುತಿಸಿ, ಜಲ್ಲಿ ಕ್ರಷರ್‌ಗಳನ್ನು ಸ್ಥಳಾಂತರಿಸುವ ಕುರಿತು ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಅಧಿಕಾರಿಗಳು ನೀಡಿರುವ ಅಭಿಪ್ರಾಯ ರಾಜಕೀಯ ಉದ್ದೇಶ ಹಾಗೂ ರಾಜಕೀಯ ಪಕ್ಷಗಳ ಅಣತಿಯಂತಿದೆ ಎಂದು ಆರೋಪಿಸಿದರು.
 
ಮರ್ಲೆ ಗ್ರಾಮದ 134, 188 ಹಾಗೂ 185 ಸರ್ವೆ ನಂಬರ್‌ಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಎಚ್.ಬಿ.ಸುದರ್ಶನ್,  ಸಿ.ಡಿ.ಅನಿಲ್ ಕುಮಾರ್ ಹಾಗೂ ಚೇತನ್ ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವರದಿ ತಯಾರಿಸಲಾಗಿದೆ. ನ್ಯಾಯಾಲಯದ ಆದೇಶ ಗಾಳಿಗೆ ತೂರಿ ನೀಡಿರುವ ವರದಿ ಇದು. ಮರ್ಲೆ ಗ್ರಾಮದಲ್ಲಿ ಸಾಕಷ್ಟು ಗೋಮಾಳ ಇರುವುದರಿಂದ ಜಲ್ಲಿ ಕ್ರಷರ್‌ಗೆ ಭೂಮಿ ನೀಡಲು ಯಾವುದೇ ಅಭ್ಯಂತರವಿಲ್ಲ ಎಂದು  ತಹಶೀಲ್ದಾರ್ ವರದಿ ನೀಡಿದ್ದಾರೆ ಎಂದು ದೂರಿದರು.

ತಮ್ಮ ಸಂಬಂಧಿಕರು ಮತ್ತು ಬೆಂಬಲಿಗರು ಗೋಮಾಳದಲ್ಲಿ ಜಲ್ಲಿ ಕ್ರಷರ್ ನಡೆಸುತ್ತಿರುವುದರಿಂದ ಸಚಿವ ಸಿ.ಟಿ.ರವಿ ಹೊಣೆಗಾರರಾಗಬೇಕಾಗುತ್ತದೆ. ಗಣಿಗಾರಿಕೆಗೆ ಉಳಿದ ಜಾಗವನ್ನು ಆಕ್ರಮಿಸಿಕೊಳ್ಳಲಾಗಿದೆ ಎಂದು ಬೋಜೇಗೌಡ ಆರೋಪಿಸಿದರು.

ಕಾನೂನು ತಿರುಚಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊ ಳ್ಳುವುದು ಆಗತ್ಯವಾಗಿದೆ. ಕಾನೂನುಬಾಹಿರ ನಡೆಯುತ್ತಿರುವ ಗಣಿಗಾರಿಕೆ ನಿಷೇಧಿಸಲು ಜಿಲ್ಲಾಧಿಕಾರಿ ಮುಂದಾಗಬೇಕೆಂದು ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ ಆಗ್ರಹಿಸಿದರು. ಜಲ್ಲಿ ಕ್ರಷರ್ ನಡೆಸಲು ಅವಕಾಶ ಕಲ್ಪಿಸಿರುವ ಕೆಲವು ಅಧಿಕಾರಿಗಳು ರಾಜಕಾರಣಿಗಳ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಿಪಿಐ ರಾಜ್ಯ ಮಂಡಲಿ ಸದಸ್ಯ ಬಿ.ಅಮ್ಜದ್ ದೂರಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ, ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ರಾಧಾಸುಂದರೇಶ್, ಬಹುಜನ ಸಮಾಜ ಪಕ್ಷದ ಮುಖಂಡ ಜಿ.ಕೆ.ಬಸವರಾಜು, ಕನ್ನಡ ಸೇನೆ ಸಂಚಾಲಕ ಶ್ರೀನಿವಾಸ ದೇವಾಂಗ, ಮುಖಂಡ ನಂದನ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.