ADVERTISEMENT

ಮಲೆನಾಡಲ್ಲೂ ಭಯೋತ್ಪಾದನೆ ಕುರುಹು

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 11:15 IST
Last Updated 24 ಜನವರಿ 2011, 11:15 IST

ಕಳಸ: ಶಾಂತಿಯ ನೆಲೆಬೀಡಾಗಿದ್ದ ಮಲೆನಾಡಿನ ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳಲ್ಲೂ ಭಯೋತ್ಪಾದನೆಯನ್ನು ಹರಡಲಾಗುತ್ತಿದೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್ ಖಾಂಡ್ಯ ಆರೋಪಿಸಿದರು.

ಪಟ್ಟಣದ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಭಾನುವಾರ ನಡೆದ ಹಿಂದೂ ಸಮಾವೇಶದಲ್ಲಿ ಅವರು ಮಾತನಾಡಿದರು. ಮೂಡಿಗೆರೆ ಸಮೀಪದ ಹಾಂದಿಯಲ್ಲಿ ‘ಭಾರತ ಮಾತಾ ಕೀ ಜೈ’ ಎಂದು ಹೇಳಲು ಬಹಳ ಧೈರ್ಯ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶೃಂಗೇರಿಯ 8 ಮಸೀದಿಗಳಿಗೆ ಕೆಲ ತಿಂಗಳ ಹಿಂದೆ ತಲಾ 4 ದೃಢಕಾಯದ ಮುಸ್ಲಿಂ ಯುವಕರು ಭೇಟಿ ನೀಡಿದ್ದರು. ಅವರು ಸ್ಥಳೀಯ ಮುಸ್ಲಿಂ ಯುವಕರನ್ನು ಕರೆದೊಯ್ದು ಮೊದಲಿಗೆ 3 ದಿನಗಳ ಕಾಲ ಮತ್ತು ಆನಂತರ 1 ತಿಂಗಳ ಕಾಲ ತರಬೇತಿ ನೀಡಿದ್ದಾರೆ. ಇದು ಭಯೋತ್ಪಾದಕತೆಯ ಬಗೆಗಿನ ತರಬೇತಿ ಎಂಬ ಅನುಮಾನ ಇದೆ. ಈ ಬಗ್ಗೆ ಈಗಾಗಲೇ ಗೃಹ ಇಲಾಖೆಗೆ ದೂರು ನೀಡಿದ್ದೇವೆ ಎಂದರು.

ಕ್ರೈಸ್ತ ಮಿಷನರಿಗಳು ಭಾರತದ ಸಂಸ್ಕ್ರತಿ ನಾಶ ಮಾಡಿ ಮತಾಂತರವನ್ನು ಇಂದಿಗೂ ನಡೆಸುತ್ತಲೇ ಇವೆ. ಕಾಶ್ಮೆರ ಭಾರತದ ಅವಿಭಾಜ್ಯ ಅಂಗ ಎನ್ನಲು ಐತಿಹಾಸಿಕ ಸಾಕ್ಷ್ಯಗಳು ಇದ್ದರೂ ಅದನ್ನು ಪಾಕ್ ಕಸಿಯುವ ಯತ್ನದಲ್ಲಿದೆ. ಕಾಶ್ಮೀರ ಬಿಟ್ಟುಕೊಟ್ಟರೆ ಮುಂದೆ ದೆಹಲಿಯಲ್ಲೂ ಮುಸ್ಲಿಂ ಆಡಳಿತವೇ ಬಂದಲ್ಲಿ ಆಶ್ಚರ್ಯವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಮಾತನಾಡಿದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೊರಸುಕುಡಿಗೆ ರಮೇಶ್, ಅಯೋಧ್ಯೆಯ ಸಂಪೂರ್ಣ ಭೂಮಿ ಹಿಂದೂಗಳಿಗೇ ಸಲ್ಲಬೇಕು ಎಂಬ ಹೋರಾಟಕ್ಕೆ ಬಲ ನೀಡಲು ಹನುಮಾನ್ ಯಜ್ಞ ನೆರವೇರಿಸಲಾಗಿದೆ ಎಂದರು.  ಹೊರನಾಡಿನ ಜಿ.ಬಿ.ಗಿರಿಜಾಶಂಕರ ಜೋಷಿ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಎಂ.ಪಿ.ಕುಮಾರಸ್ವಾಮಿ ಸಮಾವೇಶಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಹನೂಮತ್ ಜಾಗರಣ ಶಕ್ತಿ ಯಜ್ಞ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.