ADVERTISEMENT

ಮಹಿಳೆಯರಿಂದ ಖಾಲಿ ಕೊಡ ಪ್ರದರ್ಶನ

ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 9:08 IST
Last Updated 29 ಏಪ್ರಿಲ್ 2018, 9:08 IST
ಕುಡಿಯುವ ನೀರಿಗೆ ಆಗ್ರಹಿಸಿ ಮಹಿಳೆಯರು ಅಜ್ಜಂಪುರದ ಗ್ರಾಮ ಪಂಚಾಯಿತಿ ಮುಂಭಾಗ ಶನಿವಾರ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
ಕುಡಿಯುವ ನೀರಿಗೆ ಆಗ್ರಹಿಸಿ ಮಹಿಳೆಯರು ಅಜ್ಜಂಪುರದ ಗ್ರಾಮ ಪಂಚಾಯಿತಿ ಮುಂಭಾಗ ಶನಿವಾರ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.   

ಅಜ್ಜಂಪುರ: ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಪಟ್ಟಣದ ಗ್ರಾಮ ಪಂಚಾಯಿತಿ ಮುಂಭಾಗ ವಾಲ್ಮೀಕಿ ರಸ್ತೆ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಕೈಯಲ್ಲಿ ಖಾಲಿ ಕೊಡ ಹಿಡಿದು ಬಂದಿದ್ದ 50ಕ್ಕೂ ಹೆಚ್ಚು ಮಹಿಳೆಯರು ಸ್ಥಳೀಯ ಪಂಚಾಯಿತಿ ಆಡಳಿತಕ್ಕೆ ದಿಕ್ಕಾರ ಕೂಗಿದರು. ಹತ್ತಾರು ಪುರುಷರು ಪಂಚಾಯಿತಿ ಅಧ್ಯಕ್ಷೆಯನ್ನು ನೀರು ಪೂರೈಸುವ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡರು. ಬಳಿಕ ಬಂದ ಪಿಡಿಒಗೆ ಪ್ರತಿಭಟನಾ ನಿರತ ಮಹಿಳೆಯರು, ಕಚೇರಿಗೆ ಬಾಗಿಲು ಹಾಕುತ್ತೇವೆ, ಹೊರಗೆ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಶಿವರಾತ್ರಿಯಿಂದಲೂ ಸರಿಯಾಗಿ ನೀರು ಪೂರೈಕೆ ಆಗಿಲ್ಲ. ಅನೇಕ ಬಾರಿ ನಳದ ಮೂಲಕ ನೀರು ನೀಡುವಂತೆ ಪಂಚಾಯಿತಿಗೆ ಮನವಿ ಮಾಡಿದ್ದೇವೆ. ನಾಳೆ ನೀರು ನೀಡುವುದಾಗಿ ಹುಸಿ ಭರವಸೆ ನೀಡಿ ಅನೇಕ ಬಾರಿ ಕಳುಹಿದ್ದಾರೆ. ಇನ್ನಷ್ಟು ಒತ್ತಾಯಿಸಿದರೆ, ಕೊಳವೆ ಬಾವಿಯ ಮೋಟಾರು ಸುಟ್ಟಿದೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಕೊಳವೆ ಬಾವಿಯ ನೀರು ಬತ್ತಿವೆ ಎಂದು ಉತ್ತರಿಸುತ್ತಾರೆಯೇ ವಿನಃ ನಮ್ಮ ನೀರಿನ ಸಮಸ್ಯೆಯನ್ನು ಮಾತ್ರ ಪರಿಹರಿಸಿಲ್ಲ ಎಂದು ಪ್ರತಿಭಟನಾ ನಿರತ ಗೀತಾ ದೂರಿದರು.

ADVERTISEMENT

‘ಗ್ರಾಮದ ಅನೇಕ ಜನರು ನೀರು ಪೂರೈಕೆ ಆಗುವ ಮುಖ್ಯ ಪೈಪ್ ತಳ ಭಾಗಕ್ಕೆ ಪೈಪ್ ಅಳವಡಿಸಿ ನಳ ಹಾಕಿಸಿಕೊಂಡಿದ್ದಾರೆ. ಇವರು ಸದಾ ನೀರು ಪಡೆಯುತ್ತಿದ್ದಾರೆ. ಹಣ ಕೊಟ್ಟ ಭಾಗಗಳಿಗೆ ನೀರುಗಂಟಿಗಳೂ ಹೆಚ್ಚು ನೀರು ಪೂರೈಕೆ ಆಗುವಂತೆ ನೋಡಿಕೊಳ್ಳುತ್ತಾರೆ. ನಮ್ಮಂತಹ ಬಡವರಿಗೆ ನೀರು ಸಿಗುತ್ತಿಲ್ಲ. ಪ್ರಸ್ತುತ ನೀರಿಲ್ಲದೇ ಪರದಾಡುತ್ತಿದ್ದೇವೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ’ ಆಗ್ರಹಿಸಿದರು.

‘ಗ್ರಾಮದ ಜನರಿಗೆ ಎರೆಹೊಸೂರು ರಸ್ತೆಯಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳದ ಒರತೆ ನೀರು ಬಳಸಿಕೊಳ್ಳಲು ಈ ಹಿಂದೆ ಶಾಸಕರು ₹5ಲಕ್ಷ ಅನುದಾನ ನೀಡಿದ್ದರು. ಜತೆಗೆ ಪಂಚಾಯಿತಿ ಅನುದಾನವನ್ನೂ ಬಳಸಿಕೊಂಡು ಕಾಮಗಾರಿ ಸ್ಥಳದಿಂದ ಪೈಪ್ ಲೈನ್ ಮಾಡಲಾಗಿತ್ತು ಜತೆಗೆ ವಿದ್ಯುತ್ ಟಿಸಿಯನ್ನೂ ಅಳವಡಿಸಲಾಗಿತ್ತು. ಆದರೆ ಪ್ರಸ್ತುತ ಪಂಚಾಯಿತಿ ಒರತೆ ನೀರು ಬಳಸಿಕೊಳ್ಳುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಪ್ರಭಾವಿಗಳು ಟ್ಯಾಂಕರ್ ಮೂಲಕ ಅಡಿಕೆ ತೋಟಗಳಿಗೆ ನೀರು ಕೊಂಡೊಯ್ಯುತ್ತಿದ್ದಾರೆ. ಹೀಗಿದ್ದರೂ ಸ್ಥಳೀಯ ಆಡಳಿತ ಕಣ್ಮಚ್ಚಿ ಕುಳಿತಿದೆ’ ಎಂದು ವೆಂಕಟೇಶ್ ದೂರಿದರು.

**
ಹೊಸದಾಗಿ ಎರಡು ಕೊಳವೆ ಬಾವಿ ಕೊರೆಯಿಸಿದ್ದು, ಪೈಪ್ ಲೈನ್ ಅಳವಡಿಕೆ ಕಾಮಗಾರಿಯೂ ಪೂರ್ಣಗೊಂಡಿದೆ. ಭಾನುವಾರ ವಾಲ್ಮೀಕಿ ರಸ್ತೆಗೆ ನೀರು ನೀಡಲಾಗುವುದು
– ಹರ್ಷವರ್ಧನ್, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.