ADVERTISEMENT

ಮೂಡಿಗೆರೆ: ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 9:00 IST
Last Updated 17 ಸೆಪ್ಟೆಂಬರ್ 2011, 9:00 IST

ಮೂಡಿಗೆರೆ: ರಾಜ್ಯ ಸರ್ಕಾರ ಹತ್ತು ಹಲವು ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದ್ದು, ರಾಜ್ಯದ ಅಭಿವೃದ್ಧಿ ಕಡೆಗಣಿಸಿದೆ. ರಸ್ತೆ ಕಾಮಗಾರಿಗಳಲ್ಲಿ ಭಾರಿ ಅವ್ಯವ ಹಾರ ನಡೆದಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. 

  ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಆರಂಭಿಸಿ ಪಟ್ಟಣದ ಕೆ.ಎಂ.ರಸ್ತೆ ಮೂಲಕ   ತಾಲ್ಲೂಕು ಕಚೇರಿ ತೆರಳಿ ಅಲ್ಲಿ ಧರಣಿ ನಡೆಸಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಮರೆತಿದ್ದು, ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಕೈಗೊಂಡಿರುವ ಎಲ್ಲಾ ಕಾಮಗಾರಿಗಳು ಕಳಪೆಯಾಗಿವೆ. ರಾಜ್ಯಪಾಲರು, ಲೋಕಾಯುಕ್ತರು ತನಿಖೆ ನಡೆಸುವಂತೆ ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆದ ಎಲ್ಲಾ ಬೆಳೆಗಳಿಗೆ ಹಾನಿಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ಮತ್ತು ರಸ್ತೆ ಕಾಮಗಾರಿ ತಕ್ಷಣ ಕೈಗೊಳ್ಳುವಂತೆ ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ಮನು, ಕೆಪಿಸಿಸಿ ಕಾರ್ಯದರ್ಶಿ ಹಾಲಪ್ಪ ಗೌಡ, ಜಿಪಂ ಸದಸ್ಯರಾದ ಜ್ಯೋತಿ ಹೇಮಶೇಖರ್,ಎಂ.ಎಸ್.ಅನಂತ್, ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷ, ಪದಾಧಿಕಾರಿಗಳು ಇದ್ದರು.

ರಸ್ತೆಗೆ ಬಾಳೆಗಿಡ ನೆಟ್ಟು ಪ್ರತಿಭಟನೆ
ಗಂಗನಮಕ್ಕಿ(ಮೂಡಿಗೆರೆ ತಾಲ್ಲೂಕು): ತಾಲ್ಲೂಕಿನ ರಸ್ತೆಗಳನ್ನು ತಕ್ಷಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಗಂಗನಮಕ್ಕಿ ಬಳಿ ತಾಲ್ಲೂಕು ನಾಗರಿಕ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಬಾಳೆಗಿಡ ನೆಟ್ಟು ರಸ್ತೆ ತಡೆಮಾಡಲಾಯಿತು. 

 ರೈತ ಸಂಘದ ಮುಖಂಡ ದಯಾಕರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿ ಮರೆತು ಯಾವುದೇ ಕಾಮಗಾರಿ ಮಾಡುತ್ತಿಲ್ಲ ಎಂದರು.

 ಹೋರಾಟ ಸಮಿತಿ ಅಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಮಾತನಾಡಿ, ತಾಲ್ಲೂಕು ಕೇಂದ್ರ ಹಾಗೂ ಗ್ರಾಮಾಂತರ ಪ್ರದೇಶದ ಶೇ 85ಕ್ಕೂ ಹೆಚ್ಚಿನ ರಸ್ತೆಗಳು ಕಳಪೆ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುಂಡಿ ಬಿದ್ದು, ಪ್ರತಿನಿತ್ಯ ಹತ್ತಾರು ವಾಹನಗಳು ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ಇದ್ದರೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.  ಸಣ್ಣ ಬೆಳೆಗಾರರ ಸಂಘದ ಮನೋಜ್ ಕುಮಾರ್, ಆಟೊ ಹಾಗೂ ವಾಹನ ಮಾಲೀಕರ ಸಂಘ, ರಾಜು, ಕಿರಣ್, ರಮೇಶ್ ನಾಗೇಂದ್ರ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.