ADVERTISEMENT

ಮೂಲಸೌಕರ್ಯ ಒದಗಿಸಲು ನಿವಾಸಿಗಳ ಆಗ್ರಹ

ಬಗ್ಗವಳ್ಳಿ ಗ್ರಾಮ: ಅಂಬೇಡ್ಕರ್‌ ಕಾಲೊನಿ ದುರವಸ್ಥೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 7:01 IST
Last Updated 7 ಡಿಸೆಂಬರ್ 2013, 7:01 IST

ಅಜ್ಜಂಪುರ: ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ವಿವಿಧ ಮೂಲಸೌಲಭ್ಯಗಳನ್ನು ಪೂರೈಸುವಂತೆ ಪಟ್ಟಣ ಸಮೀಪದ ಬಗ್ಗವಳ್ಳಿ ಗ್ರಾಮದ ಅಂಬೇಡ್ಕರ್‌ ಕಾಲೊನಿ ನಿವಾಸಿಗಳು ಒತ್ತಾಯಿಸಿದ್ದಾರೆ.

ಸುಮಾರು 200ಕ್ಕೂ ಹೆಚ್ಚು ಕುಟುಂಬಗಳ 700ಕ್ಕೂ ಅಧಿಕ ಸಂಖ್ಯೆಯ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರೇ ವಾಸಿಸುವ ಕಾಲೊನಿಯನ್ನು ಗ್ರಾಮದ ಮುಖ್ಯ ರಸ್ತೆಗೆ ಸಂಪರ್ಕಿಸುವ ಮತ್ತು ಕಾಲೊನಿಯೊಳಗಿನ ಮನೆಗಳ ಮುಂದಿನ ರಸ್ತೆಗಳು ಡಾಂಬರ್ ಅಥವಾ ಕಾಂಕ್ರೀಟ್ ಕಂಡಿಲ್ಲ.

ಈಗಾಗಲೇ ಇರುವ ಚರಂಡಿಗಳು ಅಲ್ಲಲ್ಲಿ ಹಾಳಾಗಿದ್ದು, ಮನೆಯ ಮಲಿನ ನೀರು ಹರಿದು ಹೋಗದೇ ಕೊಳಚೆ ನಿರ್ಮಾಣವಾಗಿ, ಸೊಳ್ಳೆಗಳ ಆವಾಸ ತಾಣವಾಗಿ ಮಾರ್ಪಟ್ಟಿವೆ. ಓವರ್‌ ಹೆಡ್ ಟ್ಯಾಂಕ್‌ ನಿರ್ಮಾಣ ಆಗದಿರುವುರಿಂದ  ನಿವಾಸಿಗಳು ಶುದ್ದ ಕುಡಿಯುವ ನೀರಿನಿಂದಲೂ ವಂಚಿತಗೊಂಡಿದ್ದಾರೆ. ಅನೇಕರು ನೈರ್ಮಲ್ಯದ ಸಮಸ್ಯೆ ಮತ್ತು  ಆಶುದ್ದ ಕುಡಿಯುವ ನೀರಿನ ಸೇವನೆಯಿಂದ ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಲೊನಿಯಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ನಿವೇಶನದ ಅಗತ್ಯ ಇರುವ ಎರಡು ನೂರಕ್ಕೂ ಅಧಿಕ ಕುಟುಂಬಗಳಿಗೆ  ಸರ್ಕಾರ ನಿವೇಶನ ನೀಡ­ಬೇಕು ಎಂದು ಆಗ್ರಹಿಸುವ ಇಲ್ಲಿನ ನಿವಾಸಿಗಳು  ನಿರುದ್ಯೋಗ ಸಮಸ್ಯೆ ಎದುರಿಸು­ತ್ತಿರುವ ಇಲ್ಲಿನ ಯುವಕರಿಗೆ ಕೆಲಸ ನೀಡುವ ಮೂಲಕ ಆರ್ಥಿಕ ಸ್ವಾವಲಂಬಿ ಜೀವನ ನಡೆಸಲು ಸಹಕರಿಸಬೇಕು ಎನ್ನುತ್ತಾರೆ.

ಬಹಳಷ್ಟು ಸಂಖ್ಯೆಯ ಆರ್ಥಿಕ ದೌರ್ಬಲ್ಯದ ದುರ್ಬಲ ವರ್ಗದವರೇ ಇರುವ ಕಾಲೊನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿ­ಟ್ಟಿರುವ ನಿವೇಶನದಲ್ಲಿ ಬಾಬು ಜಗಜೀವನ್‌ ರಾವ್‌ ಸಮುದಾಯ ಭವನ ನಿರ್ಮಿಸಲು ಮತ್ತು ಕಾಲೊನಿಯ ದೇವಾಲಯದ ಜೀರ್ಣೋದ್ದಾರಕ್ಕೆ ಸರ್ಕಾರ ಅಗತ್ಯ ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ ಪ್ರಾರಂಭ ಸಮಯದಲ್ಲಿ ಕಾಲೊನಿಯಲ್ಲಿ ಸರ್ವೆ ನಡೆಸಿದ ಅಧಿಕಾರಿಗಳು ಪರಿಶಿಷ್ಠ ಜಾತಿ/ ಪಂಗಡದ ಕಾಲೊನಿಗಳ ಅಭಿವೃದ್ದಿಗೆ 50 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದ್ದರು. ಆದರೆ ಈವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಆ ಅನುದಾನ ಎಲ್ಲಿಗೆ ಹೋಯಿತು ಎಂಬುದೇ ತಿಳಿದಿಲ್ಲ. ಶಾಸಕರು, ಸಂಸದರು ದುರ್ಬಲ ವರ್ಗದವರ ನೆಮ್ಮದಿಯ ಜೀವನಕ್ಕೆ ಅನುಕೂಲ ಒದಗಿಸುವ ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಮಂಜುನಾಥ್‌ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.