ADVERTISEMENT

ಮೂಲಸೌಕರ್ಯ ಒದಗಿಸಲು ಶಾಸಕರು ವಿಫಲ

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2018, 8:55 IST
Last Updated 7 ಮೇ 2018, 8:55 IST

ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಜೀವರಾಜ್ ಜನರಿಗೆ ಮೂಲಸೌಕರ್ಯ ಹಾಗೂ ಫಾರಂ ನಂ50,53, 94ಸ0, 94ಸಿಸಿ ಅಡಿ ಹಕ್ಕು ಪತ್ರ ವಿತರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಆರೋಪಿಸಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಜೀವರಾಜ್ ಅವರು ಅಭಿವೃದ್ಧಿ ಮತ್ತು ಹಣದ ನಡುವೆ ನಡೆಯುವ ಚುನಾವಣೆ ನಡೆಯುತ್ತಿದೆ ಎಂದು ಅಧಿಕಾರದ ಮದ, ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆಂದು ದೂರಿದರು.

ವಾಸ್ತವವಾಗಿ ಪ್ರಸ್ತುತ ಚುನಾವಣೆ ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಮೂರು ಭಾರಿ ಶಾಸಕರಾಗಿ, ಸಚಿವರಾಗಿ ಅನುಭವ ಹೊಂದಿದ್ದರೂ ರೈತಾಪಿ ವರ್ಗದವರಿಗೆ ಸೌಲಭ್ಯ ಒದಗಿಸುವಲ್ಲಿ ಶಾಸಕರು ವಿಫಲರಾಗಿರುವುದರಿಂದ ಜನರ ಆಕ್ರೋಶ ಅವರ ಮೇಲಿದೆ ಎಂದು ಜರಿದರು.

ADVERTISEMENT

ಬಿಜೆಪಿಯವರು ಹತಾಶರಾಗಿದ್ದು ಬೇರೆ, ಬೇರೆ ಆಸೆ ಆಮಿಷಗಳನ್ನು ಒಡ್ಡುವ ಮೂಲಕ ಅಧಿಕಾರಗಳ ಮೇಲೆ ಒತ್ತಡ ತಂದು ಚುನಾವಣೆಗೆ ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದೆ. ಜಿಲ್ಲೆಯಲ್ಲಿ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಪೂರಕ ವಾತಾವರಣವಿದೆ. ಜಿಲ್ಲೆಯಾದ್ಯಂತ ಕಾಂಗ್ರೆಸ್ ಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದರು.

ಜಿಲ್ಲಾ ವಕ್ತಾರ ಶಿವಸ್ವಾಮಿ ಮಾತನಾಡಿ, ‘ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು ತಮ್ಮ ಕ್ಷೇತ್ರ ಬಿಟ್ಟುಹೋಗದ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಶಾಸಕ ಜೀವರಾಜ್ ತಮ್ಮ ಕ್ಷೇತ್ರ ಬಿಟ್ಟು ಜಿಲ್ಲಾ ಕೇಂದ್ರಕ್ಕೂ ಹೋಗದ ಸ್ಥಿತಿ ನಿರ್ಮಾಣವಾಗಿರುವುದು, ರಾಜ್ಯ ಮಟ್ಟದ ನಾಯಕರೆನಿಸಿಕೊಂಡಿರುವ ಸಿ.ಟಿ.ರವಿ ತಮ್ಮ ಕ್ಷೇತ್ರದಲ್ಲಿಯೇ ಉಳಿಯುವ ಸ್ಥಿತಿ ನಿರ್ಮಾಣವಾಗಿರುವುದು ಇವರಿಬ್ಬರ ಸೋಲು ನಿಶ್ಚಿತ’ ಎಂದು ಹೇಳಿದರು.

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಸದಾಶಿವ. ಇ.ಸಿ.ಜೋಯಿ, ಅಬೂಬಕರ್, ಅಂಜುಮ್, ಪಾಪಚ್ಚ, ಸೈಯದ್ ಸಿಗ್ ಬತ್ತುಲ್ಲಾ, ಉಪೇಂದ್ರ ಇದ್ದರು.

ರಾಜೇಗೌಡ ಗೆಲುವು ನಿಶ್ಚಿತ : ಡಾ.ಅಂಶುಮಂತ್

ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡರ ಗೆಲುವು ನಿಶ್ಚಿತ ಎಂದು ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಶಾಸಕರು ಹತಾಶರಾಗಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ವಿಚಾರಗಳ ಆಧಾರದ ಮೇಲೆ ಮತಯಾಚನೆ ಮಾಡದೆ ಅಪಪ್ರಚಾರದ ಮಾಡುವ ಮೂಲಕ ವಿರೋಧ ಪಕ್ಷವನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.

ಕ್ಷೇತ್ರದ ಆರಾಧನಾ ಸಮಿತಿ ಅಧ್ಯಕ್ಷರಾಗಿದ್ದ ಶಾಸಕರು 5ವರ್ಷಗಳಿಂದ ಸಭೆಯನ್ನು ಕರೆಯದೆ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ದೇವಾಲಯಗಳ ನಿರ್ವಹಣೆಗೆ ನೀಡುವ ತಸ್ತಿಕ್ ಹಣ ವಾರ್ಷಿಕ ₹12 ಸಾವಿರವಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಾರ್ಷಿಕ ₹48 ಸಾವಿರಕ್ಕೆ ಹೆಚ್ಚಿಸಲಾಗಿದೆ, ಆದರೂ ಸಹ ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಅಪಪ್ರಚಾರದಲ್ಲಿ ಶಾಸಕರು ತೊಡಗಿದ್ದಾರೆಂದು ಆರೋಪಿಸಿದರು.

ಜವಾಬ್ಧಾರಿ ಸ್ಥಾನದಲ್ಲಿರುವವರು ಧರ್ಮವನ್ನು ರಾಜಕಾರಣದಲ್ಲಿ ಬಳಸಬಾರದೆಂದು ಕಿವಿ ಮಾತು ಹೇಳಿದರು. ಬಿಜೆಪಿಯವರಿಗೆ ಅನುಮಾನವಿದ್ದರೆ ಮುಜರಾಯಿ ಇಲಾಖೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಈ ಭಾಗದ ದೇವಾಲಯಗಳಿಗೆ ಎಷ್ಟು ಅನುದಾನ ಬಂದಿದೆ ಎಂದು ಮಾಹಿತಿ ಪಡೆಯಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.